ಮೀರಟ್: ವಂದೇ ಮಾತರಂ ವಿಷಯವಾಗಿ ಬಿಜೆಪಿ, ಎಐಎಂಐಎಂ ಸದಸ್ಯರ ನಡುವೆ ಘರ್ಷಣೆ
ಮೀರಟ್ ನ ನೂತನ ಮೇಯರ್ ಹಾಗೂ ಕೌನ್ಸಿಲರ್ ಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡುವ ವಿಚಾರವಾಗಿ ಬಿಜೆಪಿ-ಎಐಎಂಐಎಂ ಸದಸ್ಯರ ನಡುವೆ ಘರ್ಷಣೆ ಉಂಟಾಗಿದ್ದು, ಬಿಜೆಪಿಯ ಇಬ್ಬರು ಕೌನ್ಸಿಲರ್ ಗಳನ್ನು ಬಂಧಿಸಲಾಗಿದೆ.
Published: 27th May 2023 05:15 PM | Last Updated: 27th May 2023 05:15 PM | A+A A-

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಮೀರಟ್: ಮೀರಟ್ ನ ನೂತನ ಮೇಯರ್ ಹಾಗೂ ಕೌನ್ಸಿಲರ್ ಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡುವ ವಿಚಾರವಾಗಿ ಬಿಜೆಪಿ-ಎಐಎಂಐಎಂ ಸದಸ್ಯರ ನಡುವೆ ಘರ್ಷಣೆ ಉಂಟಾಗಿದ್ದು, ಬಿಜೆಪಿಯ ಇಬ್ಬರು ಕೌನ್ಸಿಲರ್ ಗಳನ್ನು ಬಂಧಿಸಲಾಗಿದೆ.
ಇಬ್ಬರಿಗೂ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ. ಎಐಎಂಐಎಂ ಕೌನ್ಸಿಲರ್ ದಿಲ್ಶಾದ್ ಸೈಫಿ ನೀಡಿದ ದೂರಿನ ಆಧಾರದಲ್ಲಿ ಬಿಜೆಪಿ ನಾಯಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಯೋಗೇಂದ್ರ ಸಿಂಗ್ ಹೇಳಿದ್ದಾರೆ.
ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂನ ಕೌನ್ಸಿಲರ್‌ಗಳು ವಂದೇ ಮಾತರಂ ಹಾಡಲು ನಿರಾಕರಿಸಿದಾಗ ಸಮಸ್ಯೆ ಆರಂಭವಾಯಿತು.
ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಎರಡು ಪಕ್ಷಗಳ ಸದಸ್ಯರನ್ನು ಚದುರಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಬಿಜೆಪಿ ಕೌನ್ಸಿಲರ್ ರಾಜೀವ್ ಕಾಳೆ 8 ಎಐಎಂಐಎಂ ಕೌನ್ಸಿಲರ್‌ಗಳ ವಿರುದ್ಧ ಹಲ್ಲೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.
ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಗೆ ಅವಮಾನ ಮಾಡಿದ ಆರೋಪದ ಮೇಲೆ ರಾಜ್ಯಸಭಾ ಸಂಸದ ಲಕ್ಷ್ಮೀಕಾಂತ್ ಬಾಜ್‌ಪೇಯ್ ಕೂಡ ಎಐಎಂಐಎಂ ವಿರುದ್ಧ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ. ಆದರೆ, ಈ ಸಂಬಂಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.