ಪದಕಗಳನ್ನು ಗಂಗಾ ನದಿಗೆ ಎಸೆಯದೆ ವಾಪಸ್ಸಾದ ಕ್ರೀಡಾಪಟುಗಳು: ಕೇಂದ್ರ ಸರ್ಕಾರಕ್ಕೆ 5 ದಿನ ಡೆಡ್ ಲೈನ್!
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕ್ರೀಡಾಪಟುಗಳು ಇಂದು ತಮ್ಮ ಪದಕಗಳನ್ನು ಹರಿದ್ವಾರದ ಹರ್ ಕಿ ಪೌರಿಯಲ್ಲಿ ಗಂಗಾ ನದಿಗೆ ಎಸೆಯುವುದಾಗಿ ತೆರಳಿದ್ದರು.
Published: 30th May 2023 08:29 PM | Last Updated: 30th May 2023 08:49 PM | A+A A-

ಕುಸ್ತಿಪಟುಗಳು
ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕ್ರೀಡಾಪಟುಗಳು ಇಂದು ತಮ್ಮ ಪದಕಗಳನ್ನು ಹರಿದ್ವಾರದ ಹರ್ ಕಿ ಪೌರಿಯಲ್ಲಿ ಗಂಗಾ ನದಿಗೆ ಎಸೆಯುವುದಾಗಿ ತೆರಳಿದ್ದರು. ಆದರೆ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು ಕೇಂದ್ರ ಸರ್ಕಾರಕ್ಕೆ ಐದು ದಿನಗಳ ಡೆಡ್ ಲೈನ್ ನೀಡಿದ್ದಾರೆ.
ಹರಿದ್ವಾರದ ಹರ್ ಕಿ ಪೌರಿಗೆ ಬಂದಿದ್ದ ಪ್ರತಿಭಟನಾನಿರತ ಕುಸ್ತಿಪಟುಗಳು ಇದೀಗ ರೈತ ಮುಖಂಡ ನರೇಶ್ ಟಿಕಾಯತ್ ಅವರ ಮನವೊಲಿಕೆಗೆ ಮಣಿದಿದ್ದು, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಐದು ದಿನಗಳ ನಂತರ ಮತ್ತೆ ಹಿಂತಿರುಗುತ್ತೇವೆ ಎಂದು ಹೇಳಿದ್ದಾರೆ. ಇನ್ನು ಪದಕಗಳನ್ನು ರೈತ ಮುಖಂಡ ನರೇಶ್ ಟಿಕಾಯತ್ ಅವರಿಗೆ ನೀಡಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಲು ಕೇಂದ್ರ ಸರ್ಕಾರಕ್ಕೆ ಐದು ದಿನಗಳ ಕಾಲಾವಕಾಶ ನೀಡಿದ್ದಾರೆ. ಲೈಂಗಿಕ ಕಿರುಕುಳದ ಆರೋಪದ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹಿಂತಿರುಗುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಗಡುವು ಮುಗಿಯುವವರೆಗೆ ಕ್ರೀಡಾಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಪ್ರತಿಭಟನೆ: ಇಂದು ಸಂಜೆ 6 ಗಂಟೆಗೆ ಗಂಗಾ ನದಿಗೆ ಪದಕ ಎಸೆಯುತ್ತೇವೆ- ಕುಸ್ತಿಪಟುಗಳು
ಇದಕ್ಕೂ ಮುನ್ನ, ದೆಹಲಿಯ ಜಂತರ್ ಮಂತರ್ ನಲ್ಲಿ ಕ್ರೀಡಾಪಟುಗಳನ್ನು ತೆರವುಗೊಳಿಸಿದ ನಂತರ ಅಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಸುಗಮವಾಗಿ ನಡೆಯುತಿತ್ತು. ಆದರೆ ಭಾನುವಾರ ಪದೇ ಪದೇ ಮಾಡಿದ ಮನವಿಗಳನ್ನು ನಿರ್ಲಕ್ಷಿಸಿ ಪ್ರತಿಭಟನಾಕಾರರು ಕಾನೂನು ಉಲ್ಲಂಘಿಸಿದರು. ಆದ್ದರಿಂದ ದೆಹಲಿ ಪೊಲೀಸರು ಅಲ್ಲಿಂದ ಅವರನ್ನು ತೆರವುಗೊಳಿಸಿ ಧರಣಿ ಕೊನೆಗೊಳಿಸಿದ್ದರು.
ಇನ್ನು ಭಾನುವಾರ ನೂತನ ಸಂಸತ್ ಭವನದ ಕಡೆಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ತಡೆದಿದ್ದರು. ಇದು ಘರ್ಷಣೆಗೆ ಕಾರಣವಾಯಿತು. ನಂತರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಸೇರಿದಂತೆ 109 ಪ್ರತಿಭಟನಾಕಾರರನ್ನು ಜಂತರ್ ಮಂತರ್‌ನಲ್ಲಿ ಬಂಧಿಸಲಾಯಿತು. ನಂತರ ಮಹಿಳಾ ಬಂಧಿತರನ್ನು ಭಾನುವಾರ ಸಂಜೆ ಬಿಡುಗಡೆ ಮಾಡಲಾಯಿತು.