ನವದೆಹಲಿ: ದೇಶದ ದಕ್ಷಿಣ ಭಾಗದಲ್ಲಿ ಹಾಗೂ ದೇಶದ ಉಳಿದ ಭಾಗಗಳಲ್ಲಿ ನವೆಂಬರ್‌ನಲ್ಲಿ ದೇಶದಾದ್ಯಂತ ಈಶಾನ್ಯ ಮಾನ್ಸೂನ್ ತಾಪಮಾನ ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿ ಅಕ್ಟೋಬರ್ 20 ರಂದು ಆಗಮಿಸುತ್ತದೆ ಮತ್ತು ಇದು ಡಿಸೆಂಬರ್ ವರೆಗೆ ಇರಲಿದ್ದು, ಇದು ತಮಿಳುನಾಡು, ಪುದುಚೇರಿ, ಕರಾವಳಿ ಆಂಧ್ರ ಪ್ರದೇಶ, ಕೇರಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ದೀರ್ಘಾವಧಿಯ ಸರಾಸರಿ (LPA) 77-123% ನಷ್ಟು ಸಾಮಾನ್ಯ ಮಳೆಯನ್ನು ತರುತ್ತದೆ. ಪ್ರಮುಖವಾಗಿ ನವೆಂಬರ್‌ನಲ್ಲಿ ದಕ್ಷಿಣ ಭಾರತದಲ್ಲಿನ LPA ಮಳೆಯ ಪ್ರಮಾಣವು 118.69 mm ಆಗಿದೆ. ಆದರೆ ದೇಶದ ಉಳಿದ ಭಾಗದಲ್ಲಿ LPA ಮಳೆ ಪ್ರಮಾಣ 29.7 mm ಆಗಿದೆ ಎಂದು ಹೇಳಿದೆ.
ಈ ವರ್ಷದ ಈಶಾನ್ಯ ಮಾನ್ಸೂನ್ ಒಂದು ದಿನ ವಿಳಂಬವಾಗಿ ಅಕ್ಟೋಬರ್ 21 ರಂದು ಪ್ರಾರಂಭವಾಯಿತು. ದೀರ್ಘಾವಧಿಯ ಪ್ರವೃತ್ತಿಯು ಕಳೆದ ನಾಲ್ಕು ದಶಕಗಳಲ್ಲಿ ಈಶಾನ್ಯ ಮಾನ್ಸೂನ್ ವಿಳಂಬವಾಗುತ್ತಿದೆ ಎಂದು ತೋರಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ, 2019 ರಲ್ಲಿ ಮಾತ್ರ ಈಶಾನ್ಯ ಮಾನ್ಸೂನ್ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿತ್ತು. ವಾಯುವ್ಯ ಭಾರತ ಮತ್ತು ಮಧ್ಯ ಭಾರತದ ಭಾಗಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದೊಂದಿಗೆ ಚಳಿಗಾಲದಲ್ಲೂ ಬಿಸಿಲ ಧಗೆ ಇರುವ ಕುರಿತು IMD ಮುನ್ಸೂಚನೆ ನೀಡಿದೆ.
ಅಂತೆಯೇ, ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಕನಿಷ್ಠ ತಾಪಮಾನದ ಸಾಧ್ಯತೆಯಿದೆ ಎಂದೂ ಹೇಳಿದೆ. IMD ಪ್ರಕಾರ, ಈ ಅವಧಿಯಲ್ಲಿ ಹಗಲು ತಂಪಾಗಿರುತ್ತದೆ ಮತ್ತು ರಾತ್ರಿ ಬೆಚ್ಚಗಿರುತ್ತದೆ. ಎಲ್ ನಿನೊ ಪರಿಸ್ಥಿತಿಗಳು ಇನ್ನೂ ಉಳಿದುಕೊಂಡಿದ್ದು, ಇದು ಚಳಿಗಾಲದಲ್ಲೇ ಬಿಸಿಲ ಧಗೆ ಉಂಟುಮಾಡುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅಕ್ಟೋಬರ್ ಇತಿಹಾಸದಲ್ಲಿ ಅತ್ಯಂತ ಶುಷ್ಕ ಮತ್ತು ಬೆಚ್ಚಗಿನ ತಿಂಗಳುಗಳಲ್ಲಿ ಒಂದಾಗಿದೆ. ಇದು 1901 ರಿಂದ ಆರನೇ ಒಣ ತಿಂಗಳು ಮತ್ತು ಮೂರನೇ ಅತಿ ಹೆಚ್ಚು ಬೆಚ್ಚಗಿದ್ದ (ಬಿಸಿಲು ಹೆಚ್ಚಿದ್ದ) ತಿಂಗಳಾಗಿದೆ. ಇದು ಅವಳಿ ಚಂಡಮಾರುತಗಳ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement