ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಉಚಿತ ಭೇಟಿ: ಅಮಿತ್ ಶಾ ಭರವಸೆ
ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣದ ಎಲ್ಲಾ ನಿವಾಸಿಗಳಿಗೆ ಅಯೋಧ್ಯೆಯ ರಾಮ ಮಂದಿರ ಭೇಟಿಗೆ ಉಚಿತ ವ್ಯವಸ್ಥೆ ಮಾಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಭರವಸೆ ನೀಡಿದ್ದಾರೆ.
ಗದ್ವಾಲ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿದೆ ಮತ್ತು ವಿಳಂಬ ಮಾಡಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನದ ಭೂಮಿಪೂಜೆ ನೆರವೇರಿಸಿದ್ದು, 2024ರ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ ಎಂದರು.
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಮ್ಮ ಸರ್ಕಾರವು ಅಯೋಧ್ಯೆಯಲ್ಲಿ ಎಲ್ಲರಿಗೂ ಉಚಿತವಾಗಿ ಶ್ರೀರಾಮನ ದರ್ಶನ ಪಡೆಯುವ ಭಾಗ್ಯ ಕಲ್ಪಿಸಲಿದೆ ಎಂದು ಹೇಳಿದರು.
ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಈ ಸರ್ಕಾರ ಮುಸ್ಲಿಮರಿಗೆ ಧರ್ಮ ಆಧಾರಿತ ಮೀಸಲಾತಿಯನ್ನು ನೀಡಿದೆ. ಇದು "ಅಸಂವಿಧಾನಿಕ" ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ಧಾರ್ಮಿಕ ಮೀಸಲಾತಿಯನ್ನು ರದ್ದುಪಡಿಸಲಿದೆ ಮತ್ತು ಒಬಿಸಿ ಹಾಗೂ ಎಸ್ಟಿಗಳ ಮೀಸಲಾತಿಯನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡೂ 'ಹಿಂದುಳಿದ ವರ್ಗದ ವಿರೋಧಿ' ಪಕ್ಷಗಳು ಎಂದು ಕರೆದ ಕೇಂದ್ರ ಗೃಹ ಸಚಿವರು, ಬಿಜೆಪಿ ಮತ್ತು ಪ್ರಧಾನಿ ಮೋದಿಯಿಂದ ಮಾತ್ರ ಒಬಿಸಿಗಳಿಗೆ ಒಳ್ಳೆಯದು ಮಾಡಲು ಸಾಧ್ಯ ಎಂದು ಪ್ರತಿಪಾದಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ