ಇಂಫಾಲ್ ಬಳಿ ಹಾರುವ ವಸ್ತು ಪತ್ತೆ: ಹುಡುಕಾಟಕ್ಕೆ 2 ರಫೇಲ್ ಯುದ್ಧ ವಿಮಾನ ನಿಯೋಜಿಸಿದ ವಾಯುಪಡೆ
ಇಂಫಾಲ್ ವಿಮಾನ ನಿಲ್ದಾಣದ ಬಳಿ ನಿನ್ನೆ ಭಾನುವಾರ ಅಪರಿಚಿತ ಹಾರುವ ವಸ್ತುಗಳು(UFO) ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಭಾರತೀಯ ವಾಯುಪಡೆ (IAF), ಅವುಗಳನ್ನು ಹುಡುಕಲು ತನ್ನ ರಫೇಲ್ ಯುದ್ಧ ವಿಮಾನವನ್ನು ಕಳುಹಿಸಿದೆ.
Published: 20th November 2023 02:26 PM | Last Updated: 20th November 2023 07:41 PM | A+A A-

ರಪೇಲ್ ಯುದ್ಧ ವಿಮಾನ
ನವದೆಹಲಿ: ಇಂಫಾಲ್ ವಿಮಾನ ನಿಲ್ದಾಣದ ಬಳಿ ನಿನ್ನೆ ಭಾನುವಾರ ಅಪರಿಚಿತ ಹಾರುವ ವಸ್ತುಗಳು(UFO) ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಭಾರತೀಯ ವಾಯುಪಡೆ (IAF), ಅವುಗಳನ್ನು ಹುಡುಕಲು ತನ್ನ ರಫೇಲ್ ಯುದ್ಧ ವಿಮಾನವನ್ನು ಕಳುಹಿಸಿದೆ.
ಇಂಫಾಲ್ ವಿಮಾನ ನಿಲ್ದಾಣದ ಮೇಲೆ ಯುಎಫ್ಒ ನಿನ್ನೆ ಮಧ್ಯಾಹ್ನ 2:30 ರ ಸುಮಾರಿಗೆ ಕಾಣಿಸಿಕೊಂಡಿದ್ದು ಇದರಿಂದ ವಾಣಿಜ್ಯ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿತು.
ಇಂಫಾಲ್ ವಿಮಾನ ನಿಲ್ದಾಣದ ಬಳಿ ಯುಎಫ್‌ಒ ಬಗ್ಗೆ ಮಾಹಿತಿ ಬಂದ ಕೂಡಲೇ, ಹತ್ತಿರದ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನವು ಯುಎಫ್‌ಒಗೆ ಹುಡುಕಾಟ ನಡೆಸಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಸುಧಾರಿತ ಸಂವೇದಕಗಳನ್ನು ಹೊಂದಿದ ವಿಮಾನವು ಯುಎಫ್ ಒವನ್ನು ಹುಡುಕಲು ಶಂಕಿತ ಪ್ರದೇಶದ ಮೇಲೆ ಕೆಳಮಟ್ಟದ ಹಾರಾಟ ನಡೆಸಿತು ಆದರೆ ಅದು ಅಲ್ಲಿ ಏನೂ ಸಿಗಲಿಲ್ಲ ಎಂದು ಅವರು ಹೇಳಿದರು, ಮೊದಲ ವಿಮಾನ ಹಿಂತಿರುಗಿದ ನಂತರ, ಮತ್ತೊಂದು ರಫೇಲ್ ಯುದ್ಧವಿಮಾನವನ್ನು ಕಳುಹಿಸಲಾಯಿತು. ಹುಡುಕಾಟ ನಡೆಸಿದರೂ ಎರಡನೇ ವಿಮಾನಕ್ಕೂ ಏನೂ ದೊರಕಲಿಲ್ಲ.
ಇಂಫಾಲ್ ವಿಮಾನ ನಿಲ್ದಾಣದ ಮೇಲೆ ಯುಎಫ್ಒನ ವೀಡಿಯೊಗಳು ಇರುವುದರಿಂದ ಸಂಬಂಧಿಸಿದ ಏಜೆನ್ಸಿಗಳು ಯುಎಫ್ ಒ ವಿವರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.
ಇಂಫಾಲ್ ವಿಮಾನ ನಿಲ್ದಾಣವನ್ನು ಹಾರಾಟಕ್ಕೆ ತೆರವುಗೊಳಿಸಿದ ನಂತರ, ಭಾರತೀಯ ವಾಯುಪಡೆಯ ಶಿಲ್ಲಾಂಗ್ ಪ್ರಧಾನ ಕಮಾಂಡ್ ಈಸ್ಟರ್ನ್ ಕಮಾಂಡ್ ತಾನು ತೆಗೆದುಕೊಂಡ ಕ್ರಮಗಳ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡದೆ ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಸಕ್ರಿಯಗೊಳಿಸಿದೆ ಎಂದು ಹೇಳಿದೆ.
ಭಾರತೀಯ ವಾಯುಪಡೆಯ ರಫೇಲ್ ಯುದ್ಧವಿಮಾನಗಳನ್ನು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ನಿಯೋಜಿಸಲಾಗಿದೆ. ಚೀನಾ ಗಡಿಯುದ್ದಕ್ಕೂ ಪೂರ್ವ ವಲಯದ ವಿವಿಧ ವಾಯುನೆಲೆಗಳಿಂದ ಹಾರಾಟ ನಡೆಸುತ್ತಿದೆ.
ರಫೇಲ್ ಯುದ್ಧವಿಮಾನಗಳು ಇತ್ತೀಚೆಗೆ ಚೀನಾ ಗಡಿಯುದ್ದಕ್ಕೂ ಪೂರ್ವಿ ಆಕಾಶ್ ವಾಯು ಕಸರತ್ತಿನಲ್ಲಿ ಭಾಗವಹಿಸಿದ್ದವು.