ಸಿಲ್ಕ್ಯಾರಾ ಸುರಂಗ ಕುಸಿತ: ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ, ತಾಂತ್ರಿಕ ದೋಷದಿಂದ ತೀವ್ರ ಹಿನ್ನಡೆ

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಮತ್ತೆ ಅಡ್ಡಿ ಎದುರಾಗಿದ್ದು, ಸುರಂಗ ಕೊರೆಯುವ ಕಾರ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.
ಸಿಲ್ಕ್ಯಾರಾ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆ
ಸಿಲ್ಕ್ಯಾರಾ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆ

ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಮತ್ತೆ ಅಡ್ಡಿ ಎದುರಾಗಿದ್ದು, ಸುರಂಗ ಕೊರೆಯುವ ಕಾರ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.

ಹೌದು.. ಕುಸಿದಿರುವ ಸಿಲ್ಕ್ಯಾರಾ ಸುರಂಗದ ಅವಶೇಷಗಳ ಮೂಲಕ ಕೊರೆಯುವ ಕಾರ್ಯವನ್ನು ಗುರುವಾರ ಮತ್ತೆ ಸ್ಥಗಿತಗೊಳಿಸಲಾಗಿದ್ದು, ಉಪಕರಣಗಳನ್ನು ಅಳವಡಿಸಿರುವ ವೇದಿಕೆಯಲ್ಲೇ ಕೆಲವು ಬಿರುಕುಗಳು ಕಾಣಿಸಿಕೊಂಡಿದ್ದು, ಹೀಗಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅದರೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

ಕೊರೆಯುವಿಕೆಯನ್ನು ಪುನರಾರಂಭಿಸುವ ಮೊದಲು ರಕ್ಷಣಾ ಸಿಬ್ಬಂದಿಗಳು 25 ಟನ್ ಆಗರ್ ಯಂತ್ರವನ್ನು ಅಳವಡಿಸಲಾಗಿರುವ ವೇದಿಕೆಯನ್ನು ಮತ್ತೆ ಸ್ಥಿರಗೊಳಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 11 ದಿನಗಳಿಂದ ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರತರಲು ಕುಸಿದ ಭಾಗದ ಅವಶೇಷಗಳ ಮೂಲಕ ಉಕ್ಕಿನ ಪೈಪ್‌ಗಳ ಭಾಗಗಳನ್ನು ಅಳವಡಿಸಲಾಗುತ್ತಿದೆ. ಆದರೆ ಈ ಕಾರ್ಯಾಚರಣೆ ಬಹಳ ಸವಾಲಿನದ್ದಾಗಿದ್ದು, ಸುರಂಗ ಕೊರೆಯುವ ವೇಳೆ 3-4 ಅಡೆತಡೆಗಳನ್ನು ಎದುರಿಸಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅಟಾ ಹಸ್ನೇನ್ ಅವರು ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಸಮಯಾವಧಿಯನ್ನು ಊಹಿಸುವುದು ನ್ಯಾಯಸಮ್ಮತವಲ್ಲ. ಏಕೆಂದರೆ ಅದು ಯುದ್ಧದಂತೆಯೇ ಇರುತ್ತದೆ. ಸುರಂಗದ ಸ್ಥಳದಲ್ಲಿ ಸಿಕ್ಕಿಬಿದ್ದ ಕಾರ್ಮಿಕರಿಗೆ ತಲಾ ಒಂದರಂತೆ 41 ಆಂಬ್ಯುಲೆನ್ಸ್‌ಗಳು ಸರ್ವ ಸನ್ನದ್ಧ ಸ್ಥಿತಿಯಲ್ಲಿವೆ. ಗಂಭೀರ ಸ್ಥಿತಿಯಲ್ಲಿರುವ ಕಾರ್ಮಿಕರನ್ನು ಏರ್‌ಲಿಫ್ಟ್ ಮಾಡಲು ಸೌಲಭ್ಯಗಳಿವೆ. ಒಳಗೆ ಸಿಕ್ಕಿಬಿದ್ದಿರುವ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಬೆಳಕು ಅಥವಾ ಆಮ್ಲಜನಕದ ಕೊರತೆಯಿಲ್ಲ. ಅವರಿಗೆ ಆಹಾರ, ನೀರು, ಬಟ್ಟೆ, ಔಷಧಗಳನ್ನು ಪೂರೈಸಲಾಗುತ್ತಿದೆ ಎಂದು ಹಸ್ನೈನ್ ಹೇಳಿದರು.

ಅವರ ಪ್ರಕಾರ, ಕಾರ್ಮಿಕರೊಂದಿಗೆ ಉತ್ತಮ ಸಂವಹನ ಸಂಪರ್ಕ ಸ್ಥಾಪಿಸಲಾಗಿದ್ದು, ಇದರಿಂದ ಅವರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗುತ್ತಿದೆ. ಅಲ್ಲದೆ ಅವರ ಆತ್ಮಸ್ಥೈರ್ಯ ಕುಂದದಂತೆ ತಡೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com