ಅತ್ಯಾಧುನಿಕ ತಂತ್ರಜ್ಞಾನ, ಬೃಹತ್ ಯಂತ್ರಗಳೂ ವಿಫಲ: 41 ಕಾರ್ಮಿಕರ ಜೀವ ಉಳಿಸಿದ 'Indian Jugad' Rat Hole ಮೈನಿಂಗ್!

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸಿಲುಕಿ ಪ್ರಾಣಾಪಾಯ ಎದುರಿಸುತ್ತಿದ್ದ 41 ಜನ ಕಾರ್ಮಿಕರ ಜೀವ ಉಳಿಸಿದ 'Indian Jugad' ರ‍್ಯಾಟ್ ಹೋಲ್ ಮೈನಿಂಗ್ ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
41 ಕಾರ್ಮಿಕರ ರಕ್ಷಿಸಿದ ರ್ಯಾಟ್ ಹೋಲ್ ಮೈನಿಂಗ್ ತಂಡ
41 ಕಾರ್ಮಿಕರ ರಕ್ಷಿಸಿದ ರ್ಯಾಟ್ ಹೋಲ್ ಮೈನಿಂಗ್ ತಂಡ

ಉತ್ತರಕಾಶಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸಿಲುಕಿ ಪ್ರಾಣಾಪಾಯ ಎದುರಿಸುತ್ತಿದ್ದ 41 ಜನ ಕಾರ್ಮಿಕರ ಜೀವ ಉಳಿಸಿದ 'Indian Jugad' ರ‍್ಯಾಟ್ ಹೋಲ್ ಮೈನಿಂಗ್ ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಹೌದು.. ಅತ್ಯಾಧುನಿಕ ತಂತ್ರಜ್ಞಾನ, ಅಮೆರಿಕದಿಂದ ಬಂದ ಆಗರ್ ಯಂತ್ರ ಸೇರಿದಂತೆ ವಿದೇಶಗಳಿಂದ ತರಿಸಿಕೊಂಡಿದ್ದ ಬೃಹತ್ ಯಂತ್ರಗಳೂ ಕೂಡ ಮಾಡಲಾಗದ್ದನ್ನು ದೇಸೀ ಶೈಲಿಯ ರ‍್ಯಾಟ್ ಹೋಲ್ ಮೈನಿಂಗ್ ತಂತ್ರಗಾರಿಕೆ ಮಾಡಿ ಮುಗಿಸಿದ್ದು, ಇದೀಗ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿ ಕಾರ್ಮಿಕರು ತಮ್ಮ ತಮ್ಮ ಕುಟುಂಬ ಸೇರುವಂತಾಗಿದೆ. ಉತ್ತರಕಾಶಿ ರಕ್ಷಣಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಬಹು ಸಂಸ್ಥೆಗಳ ಕಾರ್ಯಾಚರಣೆಯ ಮೂಲಕ ಕೊನೆಗೂ ರಕ್ಷಿಸಲಾಗಿದ್ದು, ಇಷ್ಟೂ ದಿನ ಜೀವ ಕೈಯಲ್ಲಿ ಹಿಡಿದು ಸುರಂಗದಲ್ಲಿ ಸಮಯ ಕಳೆದ ಕಾರ್ಮಿಕರ ಧೈರ್ಯ ಮತ್ತು ಸಿಲುಕಿದ ಕಾರ್ಮಿಕರನ್ನು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ರ‍್ಯಾಟ್ ಹೋಲ್ ಮೈನರ್ಸ್ ಗಳಿಗೆ ದೇಶಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನ, ಬೃಹತ್ ಯಂತ್ರಗಳಿಂದಲೂ ಸಾಧ್ಯವಾಗದ್ದು ದೇಸೀ ಕಾರ್ಮಿಕರಿಂದ ಆಯ್ತು!
ಈ ಬೃಹತ್ ಕಾರ್ಯಾಚರಣೆಯಲ್ಲಿ ದೇಶ-ವಿದೇಶಗಳ ಹಲವು ಮೈನಿಂಗ್ ಸಂಸ್ಥೆಗಳು ಮತ್ತು ನುರಿತ ಕಾರ್ಮಿಕರು, ಬೃಹತ್ ಯಂತ್ರಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಕಾರ್ಮಿಕರ ರಕ್ಷಣೆಗಾಗಿ ಬಳಸಿಕೊಳ್ಳಲಾಗಿತ್ತು. ಆದರೆ ಇವೆಲ್ಲವೂ ವಿಫಲವಾದ್ದರಿಂದ ಅಂತಿಮವಾಗಿ ಮಾನವ ಶಕ್ತಿ ಬಳಕೆಯೊಂದೇ ಅಂತಿಮ ದಾರಿಯಾಗಿತ್ತು. ಹೀಗಾಗಿ ತಜ್ಞರು ಸುರಂಗದೊಳಗೆ 12 ಮಂದಿಯ ನುರಿತ ರ‍್ಯಾಟ್ ಹೋಲ್ ಮೈನಿಂಗ್ ಕಾರ್ಮಿಕರನ್ನು ನುಗ್ಗಿಸಿ ಅವರ ಮೂಲಕ ಮಾನವ ಚಾಲಿತ ಡಿಗ್ಗಿಂಗ್ ಕಾರ್ಯಾಚರಣೆ ಆರಂಭಿಸಿದರು. ಹತ್ತಾರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕೊನೆಗೂ ಕಾರ್ಮಿಕರು ಸಿಲುಕಿದ್ದ ಸ್ಥಳ ತಲುಪಿದ ರ‍್ಯಾಟ್ ಹೋಲ್ ಮೈನಿಂಗ್ ಕಾರ್ಮಿಕರು ಒಬ್ಬೊಬ್ಬರನ್ನಾಗಿ ಸುರಂಗದಿಂದ ಹೊರಗೆ ಎಳೆದು ಎಲ್ಲ 41 ಮಂದಿ ಕಾರ್ಮಿಕರನ್ನು ರಕ್ಷಿಸಿದ್ದಾರೆ.

ಅತ್ಯಂತ ಕಷ್ಟಸಾಧ್ಯವಾಗಿದ್ದ ಈ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ರ‍್ಯಾಟ್ ಹೋಲ್ ಗಣಿಗಾರಿಕೆ ತಂತ್ರದಲ್ಲಿ ಪರಿಣಿತರಾದ ಫಿರೋಜ್ ಖುರೇಷಿ ಮತ್ತು ಮೋನು ಕುಮಾರ್ ಸುರಂಗದಲ್ಲಿನ ಕೊನೆಯ ಕಲ್ಲನ್ನು ತಮ್ಮ ಡಿಗ್ಗಿಂಗ್ ಯಂತ್ರದ ಮೂಲಕ ತುಂಡರಿಸಿ ಅದನ್ನು ಪಕ್ಕಕ್ಕೆ ಸರಿಸಿ ಒಳಗಿದ್ದ ಕಾರ್ಮಿಕರನ್ನು ನೋಡುತ್ತಲೇ ಸಂತಸಗೊಂಡರು. ಜೀವದ ಹಂಗು ತೊರೆದು ತಾವು ಮಾಡಿದ ಈ ಕಾರ್ಯಾಚರಣೆ ಸಫಲವಾಗಿದ್ದಕ್ಕೆ ಅತ್ಯಂತ ಸಂತಸದಿಂದ ಕಾರ್ಮಿಕರನ್ನು ತಬ್ಬಿ ಸಂತಸ ವ್ಯಕ್ತಪಡಿಸಿದರು.

ಜೀವನ ಪರ್ಯಂತ ಮರೆಯಲಾಗದ ಕ್ಷಣ
ಖುರೇಶಿ ಮತ್ತು ಕುಮಾರ್ ಅವರು ರ‍್ಯಾಟ್-ಹೋಲ್ ಗಣಿಗಾರಿಕೆ ತಂತ್ರ ತಜ್ಞರ 12 ಸದಸ್ಯರ ತಂಡದ ಭಾಗವಾಗಿದ್ದರು. ಅವರು ಅವಶೇಷಗಳನ್ನು ತೆರವುಗೊಳಿಸುವಾಗ ಅಮೆರಿಕದ ಆಗರ್ ಯಂತ್ರವು ಬಿಟ್ಟು ಹೋಗಿದ್ದ 42 ಮೀಟರ್ ಕಲ್ಲುಗಳ ಅವಶೇಷಗಳನ್ನು ಒಂದೊಂದಾಗಿ ತೆರವು ಮಾಡುತ್ತಾ ಸಾಗಿದ್ದರು. ಖುರೇಷಿ ಅವರು ಸುರಂಗವನ್ನು ತಲುಪಿದ ತಕ್ಷಣ ಒಳಗಿದ್ದ ಕಾರ್ಮಿಕರು ಅವರನ್ನು ತಬ್ಬಿ ಅವರನ್ನು ತಮ್ಮ ಭುಜದ ಮೇಲೆ ಎತ್ತಿ ಹಿಡಿದು ಸಂಭ್ರಮಿಸಿದರು. ಈ ಕ್ಷಣದ ಕುರಿತು ಮಾತನಾಡಿದ ಖುರೇಶಿ ಮತ್ತು ಕುಮಾರ್, ಕಾರ್ಮಿಕರು ತಮಗೆ ನೀಡಿದ ಗೌರವವನ್ನು ತಾವು ಎಂದಿಗೂ ಮರೆಯುವುದಿಲ್ಲ. ನಾನು ಕೊನೆಯ ಬಂಡೆಯನ್ನು ತೆಗೆದೆ. ನಾನು ಅವರನ್ನು ನೋಡಿದೆ. ನಂತರ ನಾನು ಇನ್ನೊಂದು ಕಡೆಗೆ ಹೋದೆ. ಅವರು ನಮ್ಮನ್ನು ತಬ್ಬಿಕೊಂಡು ಎತ್ತಿ ಭುಜದ ಮೇಲೆ ಕೂರಿಸಿಕೊಂಡು ಕುಣಿದಾಡಿದರು. ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದಿದ್ದಕ್ಕಾಗಿ ಧನ್ಯವಾದ ಹೇಳಿದರು ಎಂದು ಖುರೇಶಿ ಹೇಳಿದರು.

ನಾವು ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಕೆಲಸ ಮಾಡಿದ್ದೇವೆ. ಆದರೆ ಕೊನೆಗೂ ನಾವು ನಮ್ಮ ಗುರಿಯನ್ನು ತಲುಪಿದೆವು. ಎಲ್ಲ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತಂದೆವು. ಇದು ನನ್ನ ಜೀವನ ಅತೀವ ಸಂತಸದ ಕ್ಷಣವಾಗಿದೆ. ಇದನ್ನು ನನ್ನ ಮಾತಿನಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾನು ಅದನ್ನು ನನ್ನ ದೇಶಕ್ಕಾಗಿ ಮಾಡಿದ್ದೇನೆ ಎಂದು ಖುರೇಷಿ ಹೇಳಿದರು. ಅಂದಹಾಗೆ ಖುರೇಷಿ ದೆಹಲಿ ಮೂಲದ ರಾಕ್‌ವೆಲ್ ಎಂಟರ್‌ಪ್ರೈಸಸ್‌ನ ಉದ್ಯೋಗಿಯಾಗಿದ್ದು, ಸುರಂಗ ಕೆಲಸದಲ್ಲಿ ಪರಿಣತರಾಗಿದ್ದಾರೆ.

ಇದೇ ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದ ಮತ್ತೋರ್ವ ಕಾರ್ಮಿಕ ಕುಮಾರ್ ಮಾತನಾಡಿ, ನಾವು ಒಳಗೆ ಪ್ರವೇಶಿಸುತ್ತಲೇ ಒಳಗೆ ಸಿಲುಕಿದ್ದ ಕಾರ್ಮಿಕರು ನಮ್ಮನ್ನು ನೋಡಿ ಸಂತೋಷಗೊಂಡು ನಮಗೆ ತಿನ್ನಲು ಬಾದಾಮಿ ನೀಡಿದರು. ನಾವು ಈ ಐತಿಹಾಸಿಕ ಕಾರ್ಯಾಚರಣೆಯ ಭಾಗವಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಕಾರ್ಯಾಚರಣೆಗೆ ಹಣ ಪಡೆಯದ ರಾಕ್ ವೆಲ್ ಸಂಸ್ಥೆ
ಇನ್ನು ಈ ಐತಿಹಾಸಿಕ ಕಾರ್ಯಾಚರಣೆಯಲ್ಲಿ ರಾಕ್‌ವೆಲ್ ಎಂಟರ್‌ಪ್ರೈಸಸ್‌ ತನ್ನ ಸಂಸ್ಥೆಯ 12 ಸದಸ್ಯರನ್ನು ಕಾರ್ಯಾಚರಣೆಗೆ ಇಳಿಸಿತ್ತು. ಈ ತಂಡದ ನಾಯಕ ವಕೀಲ್ ಹಾಸನ್ ರ ನೇತೃತ್ವದಲ್ಲಿ ತಂಡ ಕಳುಹಿಸಲಾಗಿತ್ತು. ನಾಲ್ಕು ದಿನಗಳ ಹಿಂದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕಂಪನಿಯು ಸಹಾಯಕ್ಕಾಗಿ ವಕೀಲ್ ಹಾಸನ್ ರನ್ನು ಸಂಪರ್ಕಿಸಿತ್ತು. ಹಾಸನ್ ಹಿಂದೆ ಮುಂದೆ ನೋಡದೆ ತಮ್ಮ ತಂಡದೊಂದಿಗೆ ಕಾರ್ಯಾಚರಣೆಗೆ ಸಿದ್ದರಾದರು. ಈ ಐತಿಹಾಸಿಕ ಕಾರ್ಯಾಚರಣೆಗಾಗಿ ರಾಕ್‌ವೆಲ್ ಎಂಟರ್‌ಪ್ರೈಸಸ್ ಯಾವುದೇ ರೀತಿಯ ಹಣ ವಿಧಿಸಿಲ್ಲ ಎಂದು ಹೇಳಲಾಗಿದೆ. ಆ ಮೂಲಕ ರಾಕ್ ವೆಲ್ ಸಂಸ್ಥೆ ಕೂಡ 41 ಜನ ಕಾರ್ಮಿಕರ ರಕ್ಷಣೆಯಲ್ಲಿ ಕೈ ಜೋಡಿಸಿ ಹೃದಯ ವೈಶಾಲ್ಯತೆ ಮೆರೆದಿದೆ. 

ರ‍್ಯಾಟ್ ಹೋಲ್ ಗಣಿಗಾರಿಕೆ ಕಾರ್ಮಿಕರ ಸಾಧನೆಗೆ ನೆಟ್ಟಿಗರಿಂದ ಉಘೇ ಉಘೇ
ಇನ್ನು ತಮ್ಮ ಸುರಂಗ ಕೊರೆಯುವ ನೈಪುಣ್ಯದಿಂದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನು ರಕ್ಷಿಸಿಕೊಂಡು ಬಂದ ರ‍್ಯಾಟ್ ಹೋಲ್ ಗಣಿಗಾರಿಕೆ ಕಾರ್ಮಿಕರ ಸಾಧನೆಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಐತಿಹಾಸಿಕ ಎಂದು ಕರೆದಿರುವ ನೆಟ್ಟಿಗರು ಅತ್ಯಾಧುನಿಕ ತಂತ್ರಜ್ಞಾನ, ಅಮೆರಿಕದಿಂದ ಬಂದ ಆಗರ್ ಯಂತ್ರ ಸೇರಿದಂತೆ ವಿದೇಶಗಳಿಂದ ತರಿಸಿಕೊಂಡಿದ್ದ ಬೃಹತ್ ಯಂತ್ರಗಳೂ ಕೂಡ ಮಾಡಲಾಗದ್ದನ್ನು ದೇಸೀ ಶೈಲಿಯ ರ‍್ಯಾಟ್ ಹೋಲ್ ಮೈನಿಂಗ್ ಕಾರ್ಮಿಕರು ಮಾಡಿ ತೋರಿಸಿದ್ದಾರೆ. ಅವರ ಶ್ರಮ, ಸಾಧನೆಗೆ ಅಭಿನಂದನೆಗಳು ಎಂದು ಶ್ಲಾಘಿಸಿದ್ದಾರೆ. ಅಲ್ಲದೆ ಈ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ ಎನ್ ಡಿಆರ್ ಎಫ್ ಪಡೆಗೂ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com