
ನವದೆಹಲಿ: ಕರ್ನಾಟಕ ಮತ್ತು ತಮಿಳು ನಾಡಿನ ಮಧ್ಯೆ ಕಾವೇರಿ ಜಲ ವಿವಾದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ.
ಕರ್ನಾಟಕ ಸರ್ಕಾರ 24 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ಮಾಡಬೇಕೆಂದು ಆದೇಶ ನೀಡಬೇಕೆಂದು ಕೋರಿ ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು, ಇಂದು ವಿಚಾರಣೆ ನಡೆಸಬೇಕಾಗಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ.
ತಮಿಳುನಾಡಿಗೆ ನೀರು ಬಿಡಬೇಕು ಎಂಬ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಕರ್ನಾಟಕ ಸರ್ಕಾರ ಕೂಡ ಪ್ರಶ್ನಿಸಲಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು, ಅಣೆಕಟ್ಟುಗಳಿಗೆ ಸಮಿತಿ ಸದಸ್ಯರ ಆಹ್ವಾನಿಸಿ ವಾಸ್ತವಾಂಶ ತಿಳಿಯುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ 24,000 ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಮಾಡಿರುವ ಮನವಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಬೇಕಾಗಿತ್ತು. ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಡಿಕೆ ಶಿವಕುಮಾರ್ ಅವರು, ನೆರೆ ರಾಜ್ಯಕ್ಕೆ ನೀರು ಬಿಡುವ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸಿದೆ ಮತ್ತು ಕಾವೇರಿ ಜಲಾನಯನ ಪ್ರದೇಶದ ನೆಲದ ವಾಸ್ತವತೆಯನ್ನು ಸುಪ್ರೀಂ ಕೋರ್ಟ್‌ಗೆ ವಿವರಿಸುವುದಾಗಿ ಗುರುವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಆಗಸ್ಟ್ 21 ರಂದು ತಮಿಳುನಾಡಿಗೆ ಆಗಸ್ಟ್ ತಿಂಗಳಿಗೆ ಕಾವೇರಿ ನದಿ ನೀರು ಹಂಚಿಕೆಗಾಗಿ ರಾಜ್ಯದ ಮನವಿಯನ್ನು ಆಲಿಸಲು ಪೀಠವನ್ನು ರಚಿಸುವುದಾಗಿ ಭರವಸೆ ನೀಡಿದ್ದರು.
Advertisement