ನೆಹರೂ ಸ್ಮಾರಕ ಮ್ಯೂಸಿಯಂ ಇನ್ಮುಂದೆ ಪ್ರಧಾನ ಮಂತ್ರಿ ಮ್ಯೂಸಿಯಂ: ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ
ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು (ಎನ್ಎಂಎಂಎಲ್) 'ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ' ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಕ್ಯಾಬಿನೆಟ್ ಸಚಿವಾಲಯದ ಅಧಿಸೂಚನೆ ತಿಳಿಸಿದೆ.
Published: 01st September 2023 01:33 PM | Last Updated: 01st September 2023 08:17 PM | A+A A-

ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು (ಎನ್ಎಂಎಂಎಲ್) 'ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ' ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಕ್ಯಾಬಿನೆಟ್ ಸಚಿವಾಲಯದ ಅಧಿಸೂಚನೆ ತಿಳಿಸಿದೆ.
'ಭಾರತ ಸರ್ಕಾರದ (ವ್ಯಾಪಾರ ಹಂಚಿಕೆ) ನಿಯಮಗಳು, 1961 ರ ಎರಡನೇ ಶೆಡ್ಯೂಲ್‌ನ 'ಸಂಸ್ಕೃತಿ ಸಚಿವಾಲಯ (ಸಂಸ್ಕೃತಿ ಮಂತ್ರಾಲಯ)' ಶೀರ್ಷಿಕೆಯಡಿಯ ನಮೂದು 9 ರಲ್ಲಿ, 'ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ' ಎಂಬ ಪದಕ್ಕೆ ಬದಲಾಗಿ 'ಪ್ರಧಾನಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ' ಎಂಬ ಪದವನ್ನು ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
President Droupadi Murmu has approved the renaming of the Nehru Memorial Museum and Library (NMML) as the Prime Ministers' Museum, reads the gazette notification. pic.twitter.com/5ydrIfLjWT
— ANI (@ANI) September 1, 2023
ಎನ್ಎಂಎಂಎಲ್‌ನ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಜೂನ್ 17 ರಂದು ನಡೆದ ವಿಶೇಷ ಸಭೆಯಲ್ಲಿ ಸಂಸ್ಥೆಯ ಹೆಸರನ್ನು ಬದಲಾಯಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.
ಆ. 14 ರಿಂದ ಅಧಿಕೃತವಾಗಿ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ಯು (ಎನ್ಎಂಎಂಎಲ್), ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ (ಪಿಎಂಎಂಎಲ್) ಆಗಿ ಬದಲಾಗಿದೆ ಎಂದು ಪಿಎಂಎಂಎಲ್ ಉಪಾಧ್ಯಕ್ಷ ಎ. ಸೂರ್ಯ ಪ್ರಕಾಶ್ ಈ ಹಿಂದೆ ತಿಳಿಸಿದ್ದರು.
ನಂತರ ಸಂಸ್ಕೃತಿ ಸಚಿವಾಲಯವು ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯ ಹೆಸರನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ ಎಂದು ಬದಲಾಯಿಸಲು ನಿರ್ಧರಿಸಲಾಗಿ ಎಂದು ಹೇಳಿತ್ತು.
ಈ ಯೋಜನೆಯನ್ನು ಎನ್ಎಂಎಂಎಲ್‌ನ ಕಾರ್ಯಕಾರಿ ಮಂಡಳಿಯು 2016ರ ನವೆಂಬರ್‌ನಲ್ಲಿ ನಡೆದ ಅದರ 162ನೇ ಸಭೆಯಲ್ಲಿ ಅನುಮೋದಿಸಿತು. ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಕಳೆದ ವರ್ಷ ಏಪ್ರಿಲ್ 21ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.
ಇದನ್ನೂ ಓದಿ: ನೆಹರು ಮ್ಯೂಸಿಯಂ ಮರುನಾಮಕರಣ: ನೆಹರೂ ಅವರ ಗುರುತು ಅವರ ಕೆಲಸವೇ ಹೊರತು ಅವರ ಹೆಸರಲ್ಲ- ರಾಹುಲ್ ಗಾಂಧಿ
ಉದ್ಘಾಟನೆ ಸಂದರ್ಭದಲ್ಲಿ ಸರ್ಕಾರದಿಂದ ಆಹ್ವಾನ ಬಂದಿದ್ದರೂ, ನೆಹರೂ-ಗಾಂಧಿ ಕುಟುಂಬದ ಯಾವುದೇ ಸದಸ್ಯರು ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿದಂತೆ ನೆಹರು-ಗಾಂಧಿ ಕುಟುಂಬದ ಮೂವರು ಈ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಮ್ಯೂಸಿಯಂ ಕಟ್ಟಡವನ್ನು ನವೀಕರಿಸಲಾಗಿದೆ. ನೆಹರು ಮ್ಯೂಸಿಯಂ ಕಟ್ಟಡದಲ್ಲಿ 'ಈಗ ಜವಾಹರಲಾಲ್ ನೆಹರೂ ಅವರ ಜೀವನ ಮತ್ತು ಕೊಡುಗೆಯ ಕುರಿತು ತಾಂತ್ರಿಕವಾಗಿ ಸುಧಾರಿತ ಪ್ರದರ್ಶನಗಳೊಂದಿಗೆ ಸಂಪೂರ್ಣವಾಗಿ ನವೀಕರಿಸಲಾಗಿದೆ' ಎಂದು ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಹೊಸ ಕಟ್ಟಡದಲ್ಲಿ ಇರಿಸಲಾಗಿರುವ ಈ ವಸ್ತುಸಂಗ್ರಹಾಲಯವು, ನಮ್ಮ ದೇಶದ ಪ್ರಧಾನ ಮಂತ್ರಿಗಳು ವಿವಿಧ ಸವಾಲುಗಳ ಮೂಲಕ ರಾಷ್ಟ್ರವನ್ನು ಹೇಗೆ ಮುನ್ನಡೆಸಿದರು ಮತ್ತು ದೇಶದ ಸರ್ವತೋಮುಖ ಪ್ರಗತಿಗೆ ಕೊಡುಗೆ ನೀಡಿದರು ಎಂಬ ಕಥೆಯನ್ನು ಹೇಳುತ್ತದೆ. ಇದು ಎಲ್ಲಾ ಪ್ರಧಾನ ಮಂತ್ರಿಗಳನ್ನು ಗುರುತಿಸುತ್ತದೆ. ಆ ಮೂಲಕ ಸಾಂಸ್ಥಿಕ ಸ್ಮರಣೆಯನ್ನು ಪ್ರಜಾಪ್ರಭುತ್ವಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.