ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆದಿತ್ಯಾ ಎಲ್1 ನೌಕೆಯ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದಿದ್ದು, ಈ ಎಲ್ಲ ಪ್ರಶ್ನೆಗಳಿಗೂ ಇಸ್ರೋ ಸಂಸ್ಥೆ ಸ್ಪಷ್ಟ ಉತ್ತರ ನೀಡಿದೆ.
ಆದಿತ್ಯ-ಎಲ್1 ಸೂರ್ಯನ ಬಳಿ ಸಾಗುತ್ತದೆಯೇ, ಸೂರ್ಯನ ಬಿಸಿಯನ್ನು ಈ ಬಾಹ್ಯಾಕಾಶ ನೌಕೆ ಹೇಗೆ ತಡೆದುಕೊಳ್ಳಬಹುದು ಎಂಬಿತ್ಯಾದಿ ಪ್ರಶ್ನೆಗಳು ಜನರಲ್ಲಿವೆ. ಇದಕ್ಕೆ ಉತ್ತರವಾಗಿ ಇಸ್ರೋ ಟ್ವಿಟರ್ ನಲ್ಲಿ ಉತ್ತರ ನೀಡಿದ್ದು, ಹಲವಾರು ಮಾಧ್ಯಮಗಳಿಂದ ತಿಳಿದಿರುವಂತೆ, ಆದಿತ್ಯ-L1 ಸೂರ್ಯನ ಕಡೆಗೆ ಹೋಗುವುದಿಲ್ಲ ಎಂದು ಹೇಳಿದೆ. ಹಾಗಾದರೆ ಆದಿತ್ಯಾ ಎಲ್ 1 ತನ್ನ ಕಾರ್ಯಾಚರಣೆ ಯಾವೆಲ್ಲಾ ಕೆಲಸ ಮಾಡಲಿದೆ ಇಲ್ಲಿದೆ ಉತ್ತರ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್-1 (Aditya L1) ಉಡಾವಣೆ ಯಶಸ್ವಿಯಾಗಿದ್ದು, ಇದು ಎಲ್ 1 ಪಾಯಿಂಟ್‌ಗೆ ಇಸ್ರೋದ ಮೊದಲ ಮಿಷನ್ ಆಗಿದೆ. ಎಂದು ಕರೆಯಲಾಗುತ್ತದೆ-L1) ಎಂಬ ಪ್ರದೇಶಕ್ಕೆ ಹೋಗುತ್ತಿದೆ. ಇದು ಭೂಮಿಯಿಂದ ಸೂರ್ಯನಿಗೆ ಇರುವ ಒಟ್ಟು ದೂರದ ಕೇವಲ ಶೇ 1 ರಷ್ಟು ದೂರವಷ್ಟೆ. ಆಗಲೂ, ಅದು ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರಲಿದೆ. ಅಂದರೆ, ಭೂಮಿಯಿಂದ ಚಂದ್ರನ ದೂರದ ಸುಮಾರು 4 ಪಟ್ಟು! ಎಂದು ಇಸ್ರೋ ಹೇಳಿದೆ.
L1 ಪಾಯಿಂಟ್ ಏಕೆ?
ಆದಿತ್ಯಾ ಎಲ್1 ನೌಕೆಯನ್ನು ಎಲ್ 1 ಪಾಯಿಂಟ್ ನಲ್ಲೇ ಸ್ಥಿರಗೊಳಿಸಲು ಹಲವು ಕಾರಣಗಳಿದ್ದು, ಆ ಪ್ರದೇಶದಲ್ಲಿ ಅಥವಾ ದೂರದಲ್ಲಿ, ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುತ್ತವೆ. ಇದರರ್ಥ, ಬಾಹ್ಯಾಕಾಶ ನೌಕೆಯು ಭೂಮಿಯನ್ನು ಸುತ್ತುವ ಅಗತ್ಯವಿಲ್ಲ ಮತ್ತು L1 ಬಿಂದುವಿನ ಸುತ್ತ ‘ಹಾಲೋ ಕಕ್ಷೆ’ ಯಲ್ಲಿ ಕುಳಿತುಕೊಳ್ಳಬಹುದು ಎಂದಾಗಿದೆ. ಇದರಿಂದ, ಬಾಹ್ಯಾಕಾಶ ನೌಕೆಯು ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುವಾಗಲಿದೆ.
ಎಲ್1 ಪಾಯಿಂಟ್ ಎಂದರೇನು?
ಭೂಮಿ ಮತ್ತು ಸೂರ್ಯರ ನಡುವೆ 15 ಕೋಟಿ ಕಿಲೋಮೀಟರ್ ಅಂತರವಿದೆ ಎನ್ನಲಾಗಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್1 ಲ್ಯಾಗ್ರೇಂಜ್ ಬಿಂದುವಿದ್ದು, ಲ್ಯಾಗ್ರೇಂಜ್ ಬಿಂದು ಎಂದರೆ ಎರಡು ಗ್ರಹಗಳ ನಡುವಣ ಗುರುತ್ವ ಶಕ್ತಿ ಶೂನ್ಯವಾಗಿರುವ ಪ್ರದೇಶ ಅಥವಾ ಶೂನ್ಯ ಬಿಂದು ಆಗಿದೆ. ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್1 ಎಂದು ಕರೆಯಲಾಗುತ್ತದೆ.
ಏನೆಲ್ಲ ಅಧ್ಯಯನ ಮಾಡಲಿದೆ?
ಸೂರ್ಯನ ಮೇಲ್ಮೈ, ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಆದಿತ್ಯ ಎಲ್-1 ಅಧ್ಯಯನ ನಡೆಸಲಿದೆ. ಈ ವಿಚಾರದಲ್ಲಿ ಇಸ್ರೋ ವಿಜ್ಞಾನಿಗಳ ಅಧ್ಯಯನಕ್ಕೆ ಪೂರಕ ಚಿತ್ರಗಳನ್ನು, ಮಾಹಿತಿಗಳನ್ನು ಒದಗಿಸಲಿದೆ.
ಹೇಗಿದ್ದಾನೆ ಸೂರ್ಯ?
ಸೂರ್ಯ ಭೂಮಿಯಿಂದ 15 ಕೋಟಿ ಕಿ.ಮೀ.ಗಳಷ್ಟು ದೂರನಿದ್ದಾನೆ. ಸೂರ್ಯನ ವಯಸ್ಸು 4.5 ಬಿಲಿಯನ್ ವರ್ಷಗಳು. ಹೈಡ್ರೋಜನ್ & ಹೀಲಿಯಂ ಗ್ಯಾಸ್‌ನ ಕೆಂಡದುಂಡೆ ಸೂರ್ಯ. ಮೇಲ್ಮೈನಲ್ಲಿ 5,500 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಮಧ್ಯಭಾಗ ಕೋರ್‌ನಲ್ಲಿ ಊಹಿಸಲಾಗದಷ್ಟು ಶಾಖವಿದೆ. 1.5ಕೋಟಿ ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನವಿದೆ.
Advertisement