ತಮಿಳು ನಾಡಿನ ತಿರುಪತ್ತೂರಿನಲ್ಲಿ ಭೀಕರ ಅಪಘಾತ: ಏಳು ಮಂದಿ ಸಾವು

ಮಿನಿ ಟೂರಿಸ್ಟ್‌ ಬಸ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್‌ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಪಲ್ಟಿಯಾಗಿ 7 ಮಂದಿ ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ತಿರುಪತ್ತೂರು ಜಿಲ್ಲೆಯ ನಾಟ್ರಂಪಲ್ಲಿ ಪಟ್ಟಣದ ಸಮೀಪದ ಸಂಡಿಯೂರಿನಲ್ಲಿ ನಡೆದಿದೆ. 
ಅಪಘಾತ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
ಅಪಘಾತ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ

ತಿರುಪತ್ತೂರು(ತಮಿಳು ನಾಡು): ಮಿನಿ ಟೂರಿಸ್ಟ್‌ ಬಸ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್‌ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಪಲ್ಟಿಯಾಗಿ 7 ಮಂದಿ ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ತಿರುಪತ್ತೂರು ಜಿಲ್ಲೆಯ ನಾಟ್ರಂಪಲ್ಲಿ ಪಟ್ಟಣದ ಸಮೀಪದ ಸಂಡಿಯೂರಿನಲ್ಲಿ ನಡೆದಿದೆ. 

10 ಮಂದಿ ಗಾಯಗೊಂಡಿದ್ದು, 9 ಮಂದಿಯನ್ನು ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಾಟ್ರಂಪಲ್ಲಿ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಐವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ.
ಬಲಿಯಾದವರನ್ನು ವೆಲ್ಲೂರು ಜಿಲ್ಲೆಯ ಪೆರ್ನಾಂಪೇಟೆ ಪಟ್ಟಣದ ನಿವಾಸಿಗಳಾದ ಸೆಲ್ವಿ (55), ಮೀರಾ (51), ದೇವಕಿ (50), ಕಲಾವತಿ (50), ಸಾವಿತ್ರಿ (42), ಗೀತಾಂಜಲಿ (35), ಮತ್ತು ದೈವಾನೈ (32) ಎಂದು ಗುರುತಿಸಲಾಗಿದೆ.

ಸೆ.8ರಂದು ಬೆಂಗಳೂರಿಗೆ ಪ್ರವಾಸಕ್ಕೆಂದು ತೆರಳಿದ್ದ 20ಕ್ಕೂ ಹೆಚ್ಚು ಮಂದಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಂದು ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಮೂಲಕ ಎರಡು ಮಿನಿ ಬಸ್‌ಗಳಲ್ಲಿ ತಮ್ಮ ಊರಿಗೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ನಾಟ್ರಂಪಳ್ಳಿ ಬಳಿಯ ಸಂಡಿಯೂರಿನ ಸರ್ವೀಸ್ ರಸ್ತೆಯಲ್ಲಿ ಮಿನಿ ಬಸ್ ಒಂದರ ಟೈರ್ ಪಂಕ್ಚರ್ ಆದ ಕಾರಣ ಸೆಂಟರ್ ಮೀಡಿಯನ್ ಬಳಿ ಬಸ್ ನಿಲ್ಲಿಸಿದ್ದಾರೆ. ರಿಪೇರಿ ಕೆಲಸ ಮಾಡುವಾಗ ಪ್ರಯಾಣಿಕರು ಬಸ್ಸಿನ ಮುಂದೆ ಕುಳಿತಿದ್ದರು.

ಈ ವೇಳೆ ಹಿಂಬದಿಯಿಂದ ಬಂದ ಐಚರ್ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರ ಮೇಲೆ ಬಿದ್ದ ಪರಿಣಾಮ ಏಳು ಮಹಿಳೆಯರು ಮೃತಪಟ್ಟಿದ್ದಾರೆ. ಚಾಲಕ, ಕ್ಲೀನರ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಾಟ್ರಂಪಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ಅವರನ್ನು ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಮೂವರ ಮೃತದೇಹಗಳನ್ನು ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಗೆ ಮತ್ತು ನಾಲ್ವರ ಮೃತದೇಹಗಳನ್ನು ತಿರುಪತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ತಿರುಪತ್ತೂರು ಜಿಲ್ಲಾಧಿಕಾರಿ ಡಿ ಭಾಸ್ಕರ ಪಾಂಡಿಯನ್ ಅವರು ತಿರುಪತ್ತೂರಿನ ಸರ್ಕಾರಿ ಆಸ್ಪತ್ರೆಗೆ ಸಂತ್ರಸ್ತರ ಸಂಬಂಧಿಕರನ್ನು ಭೇಟಿ ಮಾಡಿದರು. ವೆಲ್ಲೂರು ಜಿಲ್ಲಾಧಿಕಾರಿ ಪಿ ಕುಮಾರವೇಲ್ ಪಾಂಡಿಯನ್ ಅವರು ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದರು. ಕೃಷ್ಣಗಿರಿ ಜಿಲ್ಲಾಧಿಕಾರಿ, ಕೆಎಂ ಸರಯು ಅವರು ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಗಾಯಾಳುಗಳನ್ನು ಭೇಟಿ ಮಾಡಿದರು.

ಅಪಘಾತದಲ್ಲಿ ಮೃತಪಟ್ಟ ಏಳು ಮಹಿಳೆಯರ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50,000 ರೂಪಾಯಿ ಘೋಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com