ಹಿಂದಿ ಭಾರತೀಯ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ; ಇತರ ಭಾಷೆಗಳೊಂದಿಗೆ ಸ್ಪರ್ಧಿಸುವುದಿಲ್ಲ: ಅಮಿತ್ ಶಾ

ಹಿಂದಿಯು ಭಾರತದ ಇತರ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಮತ್ತು ಜಾಗತಿಕ ಭಾಷೆಗಳು ಮತ್ತು ಉಪಭಾಷೆಗಳನ್ನು ಗೌರವಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ
Updated on

ನವದೆಹಲಿ: ಹಿಂದಿಯು ಭಾರತದ ಇತರ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಮತ್ತು ಜಾಗತಿಕ ಭಾಷೆಗಳು ಮತ್ತು ಉಪಭಾಷೆಗಳನ್ನು ಗೌರವಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

'ಹಿಂದಿ ದಿವಸ್' ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ, ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ ಅಥವಾ ಸ್ಪರ್ಧಿಸುವುದಿಲ್ಲ. ದೇಶದಲ್ಲಿನ ಎಲ್ಲಾ ಭಾಷೆಗಳನ್ನು ಬಲಪಡಿಸುವ ಮೂಲಕ ಮಾತ್ರವೇ ಬಲವಾದ ದೇಶವು ರೂಪುಗೊಳ್ಳುತ್ತದೆ. ಎಲ್ಲಾ ಸ್ಥಳೀಯ ಭಾಷೆಗಳನ್ನು ಸಶಕ್ತಗೊಳಿಸಲು ಹಿಂದಿ ಮಾಧ್ಯಮವಾಗಲಿದೆ ಎಂದು ಹೇಳಿದರು.

'ಭಾರತವು ವೈವಿಧ್ಯಮಯ ಭಾಷೆಗಳ ದೇಶವಾಗಿದೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಹಿಂದಿಯು ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ. ಹಿಂದಿ ಪ್ರಜಾಸತ್ತಾತ್ಮಕ ಭಾಷೆಯಾಗಿದೆ. ಇದು ವಿವಿಧ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ಮತ್ತು ಅನೇಕ ಜಾಗತಿಕ ಭಾಷೆಗಳನ್ನು ಗೌರವಿಸಿದೆ ಮತ್ತು ಅವುಗಳ ಶಬ್ದಕೋಶಗಳು, ವಾಕ್ಯಗಳು ಮತ್ತು ವ್ಯಾಕರಣ ನಿಯಮಗಳನ್ನು ಅಳವಡಿಸಿಕೊಂಡಿದೆ' ಎಂದು ಶಾ ಹೇಳಿದರು.

ಸ್ವಾತಂತ್ರ್ಯ ಹೋರಾಟದ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಅಭೂತಪೂರ್ವ ಪಾತ್ರವನ್ನು ವಹಿಸಿದೆ. ಹಲವಾರು ಭಾಷೆಗಳು ಮತ್ತು ಉಪಭಾಷೆಗಳನ್ನು ಹೊಂದಿರುವ ದೇಶದಲ್ಲಿ ಏಕತೆಯ ಭಾವನೆಯನ್ನು ತುಂಬಿದೆ. ಹಿಂದಿಯು ಸಂವಹನ ಭಾಷೆಯಾಗಿ, ಸ್ವಾತಂತ್ರ್ಯ ಹೋರಾಟವನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

‘ಸ್ವರಾಜ್ಯ’ ಮತ್ತು ‘ಸ್ವಭಾಷಾ’ ಸಾಧಿಸುವ ಚಳವಳಿಗಳು ದೇಶದಲ್ಲಿ ಏಕಕಾಲಕ್ಕೆ ನಡೆಯುತ್ತಿವೆ. ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದಿಯ ಪ್ರಮುಖ ಪಾತ್ರವನ್ನು ಪರಿಗಣಿಸಿ ಮತ್ತು ಸ್ವಾತಂತ್ರ್ಯದ ನಂತರ, ಸಂವಿಧಾನದ ಶಿಲ್ಪಿಗಳು ಸೆಪ್ಟೆಂಬರ್ 14, 1949 ರಂದು ಅದನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಿದರು. ದೇಶದ ಮೂಲ ಮತ್ತು ಸೃಜನಶೀಲ ಅಭಿವ್ಯಕ್ತಿಯು ತನ್ನದೇ ಆದ ಭಾಷೆ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದರು.

ಎಲ್ಲಾ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ದೇಶದ ಸಾಂಸ್ಕೃತಿಕ ಪರಂಪರೆಯಾಗಿದ್ದು, ಅದನ್ನು ಮುಂದುವರಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಾರತೀಯ ಭಾಷೆಗಳಿಗೆ ಮನ್ನಣೆ ಮತ್ತು ಗೌರವ ಸಿಕ್ಕಿದೆ ಎಂದರು.

ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯು ಆಧುನಿಕ ತಂತ್ರಜ್ಞಾನದ ಮೂಲಕ ಸಾರ್ವಜನಿಕ ಆಡಳಿತ, ಶಿಕ್ಷಣ ಮತ್ತು ವೈಜ್ಞಾನಿಕ ಬಳಕೆಯಲ್ಲಿ ಭಾಷೆಗಳನ್ನು ಸ್ಥಾಪಿಸಲು ನೆರವಾಗುವಂತೆ ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com