ರಾಮಚರಿತ ಮಾನಸವನ್ನು ಸೈನೈಡ್ ಗೆ ಹೋಲಿಸಿದ ಬಿಹಾರ ಸಚಿವ!
ಸನಾತನ ಧರ್ಮದ ಬಗ್ಗೆ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಹೇಳಿಕೆ ಚರ್ಚೆಗೆ ಗುರಿಯಾಗಿರುವ ಬೆನ್ನಲ್ಲೇ, ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ಹೇಳಿಕೆ ಮತ್ತೊಂದು ವಿವಾದ ಹುಟ್ಟಿಸಿದೆ.
Published: 15th September 2023 04:07 PM | Last Updated: 15th September 2023 08:38 PM | A+A A-

ರಾಮಚರಿತ ಮಾನಸವನ್ನು ಸೈನೈಡ್ ಗೆ ಹೋಲಿಸಿದ ಬಿಹಾರ ಸಚಿವ!
ಪಾಟ್ನಾ: ಸನಾತನ ಧರ್ಮದ ಬಗ್ಗೆ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಹೇಳಿಕೆ ಚರ್ಚೆಗೆ ಗುರಿಯಾಗಿರುವ ಬೆನ್ನಲ್ಲೇ, ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ಹೇಳಿಕೆ ಮತ್ತೊಂದು ವಿವಾದ ಹುಟ್ಟಿಸಿದೆ.
ರಾಮಚರಿತ ಮಾನಸದಂತಹ ಗ್ರಂಥಗಳಲ್ಲಿ "ಪೊಟ್ಯಾಸಿಯಮ್ ಸೈನೈಡ್" ಗೆ ಹೋಲಿಸುವಷ್ಟು ಹಾನಿಕಾರಕ ಅಂಶಗಳನ್ನು ಹೊಂದಿದೆ ಎಂದು ಸಚಿವರು ವಿವಾದಿತ ಹೇಳಿಕೆ ನೀಡಿದ್ದಾರೆ.
ಆರ್ ಜೆಡಿ ನಾಯಕನ ಈ ಹೇಳಿಕೆಯ ವೀಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ.
ಇದು ನನ್ನ ದೃಷ್ಟಿಕೋನವಲ್ಲ, ಆದರೆ ಶ್ರೇಷ್ಠ ಹಿಂದಿ ಬರಹಗಾರ ನಾಗಾರ್ಜುನ, ಸಮಾಜವಾದಿ ಚಿಂತಕ ರಾಮ್ ಮನೋಹರ್ ಲೋಹಿಯಾ ಅವರೂ ಸಹ ರಾಮಚರಿತಮಾನಸದಲ್ಲಿ ಹಲವಾರು ಪ್ರತಿಗಾಮಿ ಆಲೋಚನೆಗಳಿವೆ ಎಂದು ಹೇಳಿದ್ದಾರೆಂದು ಸಚಿವರು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಗ್ರಂಥಗಳಲ್ಲಿ ಹಲವಾರು ಉತ್ತಮ ಚಿಂತನೆಗಳಿದೆ ಎಂದೂ ಹೇಳಿದ್ದಾರೆ. ಆದರೆ ಹಬ್ಬದ ಸಂದರ್ಭದಲ್ಲಿ 55 ಬಗೆಯ ತಿನಿಸುಗಳನ್ನು ತಯಾರಿಸಿ ಅದಕ್ಕೆ ಸೈನೈಡ್ ಸಿಂಪಡಿಸಿದರೆ ಆ ಆಹಾರ ಸೇವನೆಗೆ ಯೋಗ್ಯವಲ್ಲದಾಗುತ್ತದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
"ಶಿಕ್ಷಣ ಸಚಿವರು ಸಂತ ರವಿದಾಸ್ ಮತ್ತು ಸ್ವಾಮಿ ವಿವೇಕಾನಂದರಂತಹ ಪ್ರಗತಿಪರ ವ್ಯಕ್ತಿಗಳನ್ನು ಒಳಗೊಂಡಿರುವ ಶ್ರೇಷ್ಠ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಮಾತುಗಳ ಬಗ್ಗೆ ಏಕೆ ಮೌನವಾಗಿದ್ದಾರೆ ಎಂಬುದು ನಮಗೆ ತಿಳಿಯಬೇಕಿದೆ" ಎಂದು ಬಿಜೆಪಿ ಮಾಧ್ಯಮ ಸಮಿತಿಯ ನೀರಜ್ ಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ JD-U ನ ರಾಜ್ಯ ವಕ್ತಾರ ಅಭಿಷೇಕ್ ಝಾ ಈ ಬಗ್ಗೆ ಮಾತನಾಡಿದ್ದು "ಸಂವಿಧಾನ ಎಲ್ಲಾ ಧರ್ಮಗಳಿಗೆ ಸಮಾನ ಗೌರವವನ್ನು ನೀಡಬೇಕು ಎಂದು ಹೇಳುತ್ತದೆ. ಕೆಲವರು ಕೆಲವು ಪ್ರಚಾರವನ್ನು ಪಡೆಯುವುದನ್ನು ಹೊರತುಪಡಿಸಿ ಯಾವುದೇ ಸ್ಪಷ್ಟ ಉದ್ದೇಶವಿಲ್ಲದೆ ವಿಷಯಗಳನ್ನು ಹೇಳುತ್ತಾರೆ, ಅದನ್ನು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆರ್‌ಜೆಡಿ ವಕ್ತಾರ ಶಕ್ತಿ ಯಾದವ್ ಕೂಡ ಹೇಳಿಕೆ ನೀಡಿದ್ದು, "ನಮ್ಮ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿ ನಿಂತಿರುವುದು ನಿಜ ಆದರೆ ಅದು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು" ಎಂದು ಹೇಳಿದ್ದಾರೆ.