ನಾವೆಲ್ಲರೂ ಸನಾತನ ಧರ್ಮವನ್ನು ನಂಬುತ್ತೇವೆ: ಮಧ್ಯ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್
ಭಾರತದ ಪ್ರತಿಯೊಬ್ಬ ಪ್ರಜೆಗೂ ಸನಾತನ ಧರ್ಮದ ಮೇಲೆ ನಂಬಿಕೆಯಿದೆ ಮತ್ತು ಅದು ಚರ್ಚೆಯ ವಿಷಯವಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಶುಕ್ರವಾರ ಹೇಳಿದ್ದಾರೆ.
Published: 15th September 2023 04:47 PM | Last Updated: 15th September 2023 08:45 PM | A+A A-

ಕಮಲ್ ನಾಥ್
ಭೋಪಾಲ್: ಭಾರತದ ಪ್ರತಿಯೊಬ್ಬ ಪ್ರಜೆಗೂ ಸನಾತನ ಧರ್ಮದ ಮೇಲೆ ನಂಬಿಕೆಯಿದೆ ಮತ್ತು ಅದು ಚರ್ಚೆಯ ವಿಷಯವಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಶುಕ್ರವಾರ ಹೇಳಿದ್ದಾರೆ.
ಅಶೋಕ್ ನಗರ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರೊಂದಿಗೆ ಚುನಾವಣಾ ರ‍್ಯಾಲಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮಗೆಲ್ಲ ಸನಾತನ ಧರ್ಮದ ಮೇಲೆ ನಂಬಿಕೆ ಇದೆ. ಆದರೆ, ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಧರ್ಮಗಳನ್ನು ಹೊಂದಿದೆ ಮತ್ತು ಸನಾತನ ಧರ್ಮವು ಇತರ ಜನರನ್ನು ಅಗೌರವಿಸಲು ಕಲಿಸುವುದಿಲ್ಲ' ಎಂದರು.
'ಸನಾತನ ಧರ್ಮವನ್ನು ನಾಶಮಾಡಲು ಇಂಡಿಯಾ ಮೈತ್ರಿಕೂಟದ ವಿರೋಧ ಪಕ್ಷಗಳು ಒಂದಾಗಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕನ ಈ ಹೇಳಿಕೆ ಬಂದಿದೆ.
'ಈ ದುರಹಂಕಾರಿ (ಇಂಡಿಯಾ) ಮೈತ್ರಿಕೂಟವು ಸನಾತನದ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಬಂದಿದೆ. ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಸನಾತನ ಧರ್ಮವನ್ನು ನಂಬಿದ್ದರು. ಅಸ್ಪೃಶ್ಯತೆ ವಿರುದ್ಧ ಆಂದೋಲನ ನಡೆಸಲು ಪ್ರೇರಣೆ ನೀಡಿದ್ದು ಸನಾತನ ಧರ್ಮ. ಈ ದುರಹಂಕಾರಿ ಮೈತ್ರಿಯ ಜನರು ಆ ಸನಾತನ ಸಂಪ್ರದಾಯವನ್ನು ಕೊನೆಗಾಣಿಸಲು ಬಯಸುತ್ತಾರೆ' ಎಂದು ಪ್ರಧಾನಿ ಮಧ್ಯಪ್ರದೇಶದಲ್ಲಿ ಹೇಳಿದ್ದರು.
ಇದನ್ನೂ ಓದಿ: ಸನಾತನ ಧರ್ಮ ನಾಶ "ಘಮಾಂಡಿಯಾ" INDIA ಮೈತ್ರಿಕೂಟದ ಅಜೆಂಡಾ: ಪ್ರಧಾನಿ ಮೋದಿ
ಇದೇ ವೇಳೆ, ಸಮೀಕ್ಷಾ ವರದಿ ಹಾಗೂ ಪಕ್ಷದ ಜಿಲ್ಲಾ ನಾಯಕರ ಜತೆ ಸಮಾಲೋಚನೆ ನಡೆಸಿ ಕಾಂಗ್ರೆಸ್ ತನ್ನ ಪ್ರತಿ ಅಭ್ಯರ್ಥಿಗಳನ್ನು ವಿಧಾನಸಭೆ ಚುನಾವಣೆಗೆ ನಿರ್ಧರಿಸಲಿದೆ. 'ನಮ್ಮ ಪ್ರಮುಖ ಆದ್ಯತೆಯು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಕ್ರಿಯೆಯಾಗಿದೆ ಮತ್ತು ಅವರ ಸಮಾಲೋಚನೆಯೊಂದಿಗೆ ಎಲ್ಲವನ್ನೂ ಮಾಡಲಾಗುತ್ತದೆ. ಯಾವುದೇ ಪ್ಯಾರಾಚೂಟ್ ಅಭ್ಯರ್ಥಿಗಳಿಲ್ಲ' ಎಂದು ಕಮಲ್ ನಾಥ್ ಹೇಳಿದರು.