ಪ್ರಧಾನಿ ಮೋದಿಗೆ 73ನೇ ಜನ್ಮದಿನದ ಸಂಭ್ರಮ; ರಾಷ್ಟ್ರಪತಿ ದ್ರೌಪದಿ ಮುರ್ಮು, ದೇವೇಗೌಡ ಸೇರಿ ಗಣ್ಯರಿಂದ ಶುಭಾಶಯ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 73ನೇ ಜನ್ಮದಿನದ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.
Published: 17th September 2023 09:04 AM | Last Updated: 17th September 2023 10:04 AM | A+A A-

ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು 73ನೇ ಜನ್ಮದಿನದ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ ಶುಭಾಶಯ ಕೋರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ದೂರದೃಷ್ಟಿ ಮತ್ತು ದೃಢವಾದ ನಾಯಕತ್ವದಿಂದ 'ಅಮೃತ ಕಾಲ'ದಲ್ಲಿ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕೆಂದು ಬಯಸುತ್ತೇನೆ. ನೀವು ಯಾವಾಗಲೂ ಆರೋಗ್ಯವಂತರಾಗಿ ಮತ್ತು ಸಂತೋಷದಿಂದಿರಿ. ನಿಮ್ಮ ಅತ್ಯುನ್ನತ ನಾಯಕತ್ವದಿಂದ ದೇಶವಾಸಿಗಳಿಗೆ ಪ್ರಯೋಜನವಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಮಾಜಿ ಪ್ರಧಾನಮಂತ್ರಿ ಹೆಚ್'ಡಿ.ದೇವೇಗೌಡ ಅವರು ಪೋಸ್ಟ್ ಮಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 73 ನೇ ಹುಟ್ಟುಹಬ್ಬಕ್ಕೆ ನನ್ನ ಕಡೆಯಿಂದ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸರ್ವಶಕ್ತನಾದ ದೇವರು ರಾಷ್ಟ್ರದ ಸೇವೆ ಮಾಡಲು ಅವರಿಗೆ ಉತ್ತಮ ಆರೋಗ್ಯವನ್ನು ನೀಡಲಿ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರೂ ಕೂಡ ಮೋದಿಯವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಮೋದಿ ಪ್ರಧಾನಿಯಾದ ನಂತರ ತಮ್ಮ ಜನ್ಮದಿನವನ್ನು ಪ್ರತಿವರ್ಷ ವಿಭಿನ್ನವಾಗಿ, ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾದ ಭವ್ಯ 'ಯಶೋಭೂಮಿ' ಸಮಾವೇಶ ಕೇಂದ್ರ ಉದ್ಘಾಟಿಸಲಿದ್ದಾರೆ. ಇದು ಬೃಹತ್ ಮುಖ್ಯ ಸಭಾಂಗಣ, 15 ಕನ್ವೆನ್ಶನ್ ಕೊಠಡಿಗಳು ಮತ್ತು ವಿಶೇಷವಾದ ಬಾಲ್ ರೂಂ ಹೊಂದಿದೆ. 11,000 ಪ್ರತಿನಿಧಿಗಳಿಗೆ ಇಲ್ಲಿ ವಸತಿ ಸೌಲಭ್ಯವಿದೆ. ‘ಯಶೋಭೂಮಿ’ಯಲ್ಲಿ ಪಾರ್ಕಿಂಗ್, ಭದ್ರತೆ ಹೀಗೆ ಎಲ್ಲ ಮಾನದಂಡಗಳ ಬಗ್ಗೆಯೂ ವಿಶೇಷ ಕಾಳಜಿವಹಿಸಿ ನಿರ್ಮಿಸಲಾಗಿದೆ.
ನರೇಂದ್ರ ಮೋದಿ 17 ಸೆಪ್ಟೆಂಬರ್ 1950 ರಂದು ಗುಜರಾತ್‌ನ ಮಹೇಸನಾ ಜಿಲ್ಲೆಯ ವಡ್‌ನಗರ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. 1972 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಸೇರಿದರು. ಸ್ವಯಂಸೇವಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1978 ರಲ್ಲಿ ಉತ್ತಮ ಕಾರ್ಯಕ್ಕೆ ವಡೋದರದಲ್ಲಿ ಇಲಾಖಾ ಪ್ರಚಾರಕನ ಜವಾಬ್ದಾರಿ ನೀಡಲಾಯಿತು. 1980 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ದಕ್ಷಿಣ ಗುಜರಾತ್ ಮತ್ತು ಸೂರತ್ ವಿಭಾಗಗಳ ಪ್ರಚಾರಕ ಹೊಣೆ ಅರಸಿಬಂತು. 1987ರಲ್ಲಿ ಬಿಜೆಪಿ ಸೇರಿ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
1987ರಲ್ಲಿ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಆರಂಭಿಸಿದ ನ್ಯಾಯ ರಥಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 3 ತಿಂಗಳ ಕಾಲ ನಡೆದ ಪ್ರಯಾಣದಲ್ಲಿ ಮೋದಿ ಸಕ್ರಿಯವಾಗಿ ತೊಡಗಿಸಿಕೊಂಡರು. 1990 ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಿತು. ಒಟ್ಟು 43 ಸ್ಥಾನಗಳ ಪೈಕಿ 67 ಸ್ಥಾನಗಳು ಬಿಜೆಪಿ ಪಾಲಾಗಿದ್ದವು. ಈ ಚುನಾವಣೆಯಲ್ಲಿ ಮೋದಿ ಕೊಡುಗೆ ಅಪಾರವಾಗಿತ್ತು.
ಮೋದಿ 7 ಅಕ್ಟೋಬರ್ 2001 ರಂದು ಗುಜರಾತ್ ಮುಖ್ಯಮಂತ್ರಿಯಾದರು. 22ನೇ ಮೇ 2014 ರವರೆಗೆ ನಿರಂತರವಾಗಿ ಸಿಎಂ ಜವಾಬ್ದಾರಿ ನಿಭಾಯಿಸಿದರು. ಗುಜರಾತ್ ಮುಖ್ಯಮಂತ್ರಿ ಹುದ್ದೆ ತೊರೆದ ನಂತರ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗುಜರಾತ್‌ನಲ್ಲಿ ಸತತ 3 ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ನಂತರ, ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮನ್ನು ಪ್ರಬಲವಾಗಿ ಗುರುತಿಸಿಕೊಂಡರು.
ನರೇಂದ್ರ ಮೋದಿ 26 ಮೇ 2014 ರಂದು ಗೇಶದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಚಂಡ ಬಹುಮತದೊಂದಿಗೆ ಗೆದ್ದ ನಂತರ 30 ಮೇ 2019 ರಂದು ಸತತ ಎರಡನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿದರು. ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ 7 ಅಕ್ಟೋಬರ್ 2001 ರಿಂದ ಮೇ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.