ಕೇರಳ ಸಿಎಂ ಪುತ್ರಿ ವಿರುದ್ಧ ಪ್ರಕರಣ ದಾಖಲಿಸಿದ್ದ ಕಾರ್ಯಕರ್ತ ಗಿರೀಶ್ ಬಾಬು ಶವ ಪತ್ತೆ, ಹೃದಯಾಘಾತ ಶಂಕೆ!
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ಪ್ರಕರಣ ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಬಾಬು ಸೋಮವಾರ ಬೆಳಗ್ಗೆ ಕಲಮಶ್ಶೇರಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Published: 18th September 2023 03:28 PM | Last Updated: 18th September 2023 03:28 PM | A+A A-

ಗಿರೀಶ್ ಬಾಬು
ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ಪ್ರಕರಣ ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಬಾಬು ಸೋಮವಾರ ಬೆಳಗ್ಗೆ ಕಲಮಶ್ಶೇರಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಗಿರೀಶ್ ಅವರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನು ಅವರು ಕಳೆದ ತಿಂಗಳು ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಕಟಿಸಿದರು. ಇನ್ನು ಪೊಲೀಸರು ಗಿರೀಶ್ ಮನೆಗೆ ಆಗಮಿಸಿ ವಿಚಾರಣೆ ಆರಂಭಿಸಿದ್ದಾರೆ.
ಗಿರೀಶ್ ತನ್ನ ಕುಟುಂಬದೊಂದಿಗೆ ಕಲಮಸ್ಸೆರಿಯಲ್ಲಿ ವಾಸಿಸುತ್ತಿದ್ದು, ಇಂದು ಬೆಳಗ್ಗೆ ಆತನ ಪತ್ನಿಯೇ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಹೃದಯ ಸ್ತಂಭನದ ಪ್ರಕರಣದಂತೆ ತೋರುತ್ತಿದೆ. ಆದರೆ, ಶವಪರೀಕ್ಷೆ ವರದಿಯ ಆಧಾರದ ಮೇಲೆ ನಾವು ಅಂತಿಮ ತೀರ್ಮಾನಕ್ಕೆ ಬರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಿರೀಶ್ ಅವರು ಸಲ್ಲಿಸಿರುವ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೇರಳದಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದವು. ಪಲರಿವಟ್ಟಂ ಫ್ಲೈಓವರ್ ಹಗರಣ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ವಿರುದ್ಧದ 'ಮಾಸಿಕ ಪಾವತಿ' ಆರೋಪಗಳು ಸೇರಿದಂತೆ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿದ್ದವು.
ಇದನ್ನೂ ಓದಿ: ಹೆಣ್ಣಿನ ಮಾದರಿಯ ಟ್ರೋಫಿ ಪುರುಷರನ್ನು ಪ್ರಚೋದಿಸುತ್ತದೆ: ನಟ ಅಲೆನ್ಸಿಯರ್ ಹೇಳಿಕೆ; ತೀವ್ರ ಟೀಕೆಗೆ ಗುರಿ
ವೀಣಾ ವಿಜಯನ್‌ಗೆ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ನೀಡಿದ ಲಂಚದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರು ಮುವಾಟ್ಟುಪುಳದ ವಿಜಿಲೆನ್ಸ್ ನ್ಯಾಯಾಲಯಕ್ಕೆ ತೆರಳಿದರು. ಆದರೆ, ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಅವರು ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಮೊರೆ ಹೋಗಿದ್ದರು. ಗಿರೀಶ್ ಅವರ ಅರ್ಜಿಯನ್ನು ಕೋರ್ಟ್ ಇಂದು ಪರಿಗಣಿಸುವ ಹಂತದಲ್ಲಿದ್ದಾಗ ಅವರ ಸಾವು ಸಂಭವಿಸಿದೆ.
ನವದೆಹಲಿಯ ಆದಾಯ ತೆರಿಗೆ ಮಧ್ಯಂತರ ವಸಾಹತು ಮಂಡಳಿ(ಐಟಿಐಬಿಎಸ್) ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ತನಿಖೆಗೆ ಕೋರಿರುವ ಗಿರೀಶ್, ಸಿಎಂ ಮತ್ತು ಯುಡಿಎಫ್ ಮುಖಂಡರಾದ ರಮೇಶ್ ಚೆನ್ನಿತ್ತಲ, ಪಿ ಕೆ ಕುನ್ಹಾಲಿಕುಟ್ಟಿ ಮತ್ತು ವಿ ಕೆ ಇಬ್ರಾಹಿಂಕುಂಜು ಲಂಚ ಪಡೆದಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.