ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನಿ ಉಗ್ರನ ಹತ್ಯೆ: ಯಾರು ಈ ಸುಖ್ ಧೂಲ್ ಸಿಂಗ್?

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿಕೆ ಬೆನ್ನಲ್ಲೇ ಭಾರತ-ಕೆನಡಾ ಸಂಬಂಧ ಹಳಸಿರುವಾಗಲೇ ಮತ್ತದೇ ಕೆನಡಾದಲ್ಲಿ ಮತ್ತೋರ್ವ ಖಲಿಸ್ತಾನಿ ಉಗ್ರನ ಹತ್ಯೆಯಾಗಿದೆ.
ಸುಖ್ ಧೂಲ್ ಸಿಂಗ್
ಸುಖ್ ಧೂಲ್ ಸಿಂಗ್

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿಕೆ ಬೆನ್ನಲ್ಲೇ ಭಾರತ-ಕೆನಡಾ ಸಂಬಂಧ ಹಳಸಿರುವಾಗಲೇ ಮತ್ತದೇ ಕೆನಡಾದಲ್ಲಿ ಮತ್ತೋರ್ವ ಖಲಿಸ್ತಾನಿ ಉಗ್ರನ ಹತ್ಯೆಯಾಗಿದೆ.

ಕೆನಡಾದಲ್ಲಿ ನಡೆದ ಗ್ಯಾಂಗ್ ಹಿಂಸಾಚಾರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಅಲಿಯಾಸ್ ಸುಖಾ ಡುನೆಕೆಯನ್ನು ಕೆನಡಾದ ವಿನ್ನಿಪೆಗ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಆ ಮೂಲಕ ಮತ್ತೆ ಕೆನಡಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 

ಇಷ್ಟಕ್ಕೂ ಯಾರು ಈ ಸುಖ್ ಧೂಲ್ ಸಿಂಗ್?
ಸುಖ ದುನೆಕೆ ಎಂದೂ ಕರೆಯಲ್ಪಡುವ ಸುಖ್ ಧೂಲ್ ಸಿಂಗ್ ಭಾರತದಲ್ಲಿ ವಾಂಟೆಡ್ ಉಗ್ರರ ಲಿಸ್ಟ್‌ನಲ್ಲಿದ್ದಾನೆ. ಈತ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದು, ಈತ ಪಟ್ಟಿಯ 33ನೇ ಸ್ಥಾನದಲ್ಲಿದ್ದಾನೆ. ಈ ಹಿಂದೆ ಎನ್ ಐಎ ಸಂಸ್ಥೆಯು ಕೆನಡಾದ ಸರ್ಕಾರದ ಬಳಿ ಬೇನಾಮಿ ಆಸ್ತಿಗಳ ವಿವರಗಳನ್ನು ಕೋರಿತ್ತು.

ಪಂಜಾಬ್‌ನ ಮೋಗಾ ಜಿಲ್ಲೆಗೆ ಸೇರಿದ ಈತ 2017 ರಲ್ಲಿ ನಕಲಿ ದಾಖಲೆಗಳನ್ನು ಬಳಸಿ ಭಾರತದಿಂದ ಪರಾರಿಯಾಗಿದ್ದ. ಮೊಗಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ದೇವಿಂದರ್ ಬಾಂಬಿಹಾ ಗ್ಯಾಂಗ್‌ನೊಂದಿಗೆ ಈತನ ನಂಟು ಇತ್ತು. 

ಭಾರತೀಯ ದಾಖಲೆಗಳ ಪ್ರಕಾರ, ಆತನ ವಿರುದ್ಧ ಏಳು ಪ್ರಕರಣಗಳು ದಾಖಲಾಗಿವೆ. ಅಂತೆಯೇ ಎನ್ಐಎ ಮೂಲಗಳ ಪ್ರಕಾರ, ಸುಖ್ ಧೂಲ್ ಸಿಂಗ್ ಕೆನಡಾ ಮೂಲದ ದರೋಡೆಕೋರ ಅರ್ಶ್ದೀಪ್ ದಲ್ಲಾಗೆ ತುಂಬಾ ನಿಕಟವರ್ಚಿಯಾಗಿದ್ದ. ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗೆ ಪ್ರತಿಸ್ಪರ್ಧಿಯಾಗಿದ್ದ. ಇದೇ ಕಾರಣಕ್ಕೆ ಆತನನ್ನು ಗ್ಯಾಂಗ್ ವಾರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸರ್ರೆಯಲ್ಲಿ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಗುಂಡಿಕ್ಕಿ ಹತ್ಯೆಯಾದ ತಿಂಗಳ ನಂತರ ಸುಖ್ ಧೂಲ್ ಸಿಂಗ್ ನ ಹತ್ಯೆ ನಡೆದಿದೆ. ಜಸ್ಟಿನ್ ಟ್ರುಡೊ ಸರ್ಕಾರವು ಯಾವುದೇ ಪುರಾವೆಗಳನ್ನು ನೀಡದೆ ಹತ್ಯೆಯಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂದು ಆರೋಪಿಸಿದ ನಂತರ ಈ ವಿಷಯವು ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಭಾರತವು ಕೆನಡಾದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು ಮಾತ್ರವಲ್ಲದೇ ಕೆನಡಾ ಹೇಳಿಕೆಯನ್ನು "ಅಸಂಬದ್ಧ ಮತ್ತು ಪ್ರೇರಿತ" ಎಂದು ಕರೆದಿದೆ. ಅಲ್ಲದೆ ಕೆನಡಾದ ಭಾರತದ ರಾಯಭಾರಿಯನ್ನು ಉಚ್ಛಾಟನೆ ಮಾಡಿದೆ. ಅಲ್ಲದೆ ಪ್ರಸ್ತುತ ಕೆನಡಾ ವೀಸಾವನ್ನೂ ಕೂಡ ತಾತ್ಕಾಲಿಕವಾಗಿ ರದ್ದು ಮಾಡಿದೆ.

ಸುಖ್ ಧೂಲ್ ಸಿಂಗ್ ಹತ್ಯೆ ಹೊಣೆಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
ಇತ್ತ ಸುಖ್ ಧೂಲ್ ಸಿಂಗ್ ಹತ್ಯೆ ಹೊಣೆಯನ್ನು ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಫೇಸ್ ಬುಕ್ ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಾಕಲಾದ ಪೋಸ್ಟ್‌ನಲ್ಲಿ ದರೋಡೆಕೋರರಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಅವರ ಹತ್ಯೆಯಲ್ಲಿ ಸುಖ ಡುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದು ಇದರ ಸೇಡು ತೀರಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಯೋಜನೆ ರೂಪಿಸಿ ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com