ಲಖನೌ: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಲಖನೌದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದ ಪೈಕಿ ಒಬ್ಬರು ಅನಾರೋಗ್ಯದವರಂತೆ ನಟಿಸಿ ಗೊಂದಲ ಸೃಷ್ಟಿಸಿದ ನಂತರ 30 ಮಂದಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಸ್ಟಮ್ ಮತ್ತು ಪೊಲೀಸ್ ಅಧಿಕಾರಿಗಳು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿರುವುದಾಗಿ ಅವರು ಹೇಳಿದ್ದಾರೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಸೋಮವಾರ ಶಾರ್ಜಾದಿಂದ ಬಂದಿದ್ದ 36 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಡೆದಿದ್ದರು. ನಂತರ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಕೆಲವರಿಂದ 3 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸಿಗರೇಟ್ ಮತ್ತು 23.90 ಲಕ್ಷ ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಆರು ಪ್ರಯಾಣಿಕರು ತಾವು ಚಿನ್ನವನ್ನು ಸಾಗಿಸುತ್ತಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಶಶಾಂಕ್ ಸಿಂಗ್ ಹೇಳಿದ್ದಾರೆ.
ಮಂಗಳವಾರ ಉಳಿದ 30 ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಅವರಲ್ಲಿ ಒಬ್ಬರು ಅಸ್ವಸ್ಥರಂತೆ ನಟಿಸಿ ಗೊಂದಲ ಸೃಷ್ಟಿಸಿದ್ದರು. ಇದರ ಲಾಭ ಪಡೆದು ಎಲ್ಲರೂ ಪರಾರಿಯಾಗಿದ್ದಾರೆ. ಈ ಸಂಬಂಧ ದೂರಿನ ಮೇರೆಗೆ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Advertisement