ನವದೆಹಲಿ: "ನನ್ನ ಹೆಸರು ಅರವಿಂದ್ ಕೇಜ್ರಿವಾಲ್ ಮತ್ತು ನಾನು ಭಯೋತ್ಪಾದಕನಲ್ಲ" ಎಂದು ತಿಹಾರ್ ಜೈಲಿನಿಂದ ದೆಹಲಿ ಮುಖ್ಯಮಂತ್ರಿಗಳು ದೇಶವಾಸಿಗಳಿಗೆ ಸಂದೇಶ ಕಳುಹಿಸಿರುವುದಾಗಿ ಆಪ್ ನಾಯಕ ಸಂಜಯ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ಬಿಜೆಪಿ "ದುರುದ್ದೇಶ ಮತ್ತು ಸೇಡಿನಿಂದ" ಅರವಿಂದ್ ಕೇಜ್ರಿವಾಲ್ ಅವರನ್ನು ಮಣಿಸಲು ಪ್ರಯತ್ನಿಸುತ್ತಿದೆ. ಆದರೆ ಅವರು ಯಾವುದಕ್ಕೂ ಜಗ್ಗುವುದಿಲ್ಲ ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ತಿಹಾರ್ ಜೈಲಿನಲ್ಲಿರುವ "ಕುಖ್ಯಾತ ಕ್ರಿಮಿನಲ್" ಒಬ್ಬರಿಗೆ ಬ್ಯಾರಕ್‌ನಲ್ಲಿ ತನ್ನ ವಕೀಲರು ಮತ್ತು ಹೆಂಡತಿಯನ್ನು ಭೇಟಿಯಾಗಲು ಅನುಮತಿಸಲಾಗಿದೆ. ಆದರೆ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಬಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗಾಜಿನ ಪರದೆ ಮೂಲಕ ಭೇಟಿಯಾಗಬೇಕಾಯಿತು ಎಂದು ಹೇಳಿದ್ದಾರೆ.
ತನಗೆ ನೀಡುತ್ತಿರುವ ಕಿರುಕುಳದಿಂದ ನೊಂದ ದೆಹಲಿ ಸಿಎಂ ಕೇಜ್ರಿವಾಲ್ ಅವರು, ದೇಶವಾಸಿಗಳಿಗೆ "ನನ್ನ ಹೆಸರು ಅರವಿಂದ್ ಕೇಜ್ರಿವಾಲ್ ಮತ್ತು ನಾನು ಭಯೋತ್ಪಾದಕನಲ್ಲ" ಎಂಬ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಸಿಂಗ್ ತಿಳಿಸಿದರು.
ದೆಹಲಿ ಮುಖ್ಯಮಂತ್ರಿಯ ಈ ಸಂದೇಶ 2010 ರಲ್ಲಿ ತೆರೆಕಂಡ ಶಾರುಖ್ ಖಾನ್ ಅಭಿನಯದ 'ಮೈ ನೇಮ್ ಈಸ್ ಖಾನ್' ಚಿತ್ರದಿಂದ ಎರವಲು ಪಡೆಯಲಾಗಿದ. ಇದರಲ್ಲಿ ಚಿತ್ರದ ನಾಯಕ ಶಾರುಖ್ ಖಾನ್, ನನ್ನ ಹೆಸರು ಖಾನ್ ಮತ್ತು ನಾನು ಭಯೋತ್ಪಾದಕನಲ್ಲ" ಎಂದು ಹೇಳಲಾಗಿದೆ.
"ಕೇಜ್ರಿವಾಲ್ ಅವರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಗಾಜಿನ ಪರದೆಯ ಮೂಲಕ ಭೇಟಿ ಮಾಡಲು ಅವಕಾಶ ನೀಡಲಾಯಿತು" ಎಂದು ಸಿಂಗ್ ಆರೋಪಿಸಿದ್ದಾರೆ.
Advertisement