ಲೋಕಸಭೆ ಚುನಾವಣೆಗೆ ಟಿಎಂಸಿ ಪ್ರಣಾಳಿಕೆ ಬಿಡುಗಡೆ: ಸಿಎಎ ರದ್ದು ಸೇರಿ ಹಲವು ಭರವಸೆ
ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಬುಧವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಅಧಿಕಾರಕ್ಕೆ ಬಂದರೆ ಸಿಎಎ ರದ್ದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಇಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ಟಿಎಂಸಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರೇನ್ ಅವರು, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದರೆ ಈ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಯಂತ್ರಿಸುತ್ತೇವೆ. ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅನ್ನು ರದ್ದುಗೊಳಿಸುತ್ತೇವೆ. ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯನ್ನು ಸಹ ತಡೆಯುತ್ತೇವೆ ಎಂದು ಟಿಎಂಸಿ ನಾಯಕ ಅಮಿತ್ ಮಿತ್ರಾ ಅವರು ಭರವಸೆ ನೀಡಿದರು.
ರೇಷನ್ ಅನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಮತ್ತು ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 10 ಎಲ್ ಪಿಜಿ ಸಿಲಿಂಡರ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಟಿಎಂಸಿ ಭರವಸೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕ ಮಾತುಕತೆ ವಿಫಲವಾದ ನಂತರ ಕಳೆದ ಜನವರಿಯಲ್ಲಿ ಟಿಎಂಸಿ ಇಂಡಿಯಾ ಮೈತ್ರಿಕೂಟದಿಂದ ಹೊರ ಬಂದಿತ್ತು. ಆದಾಗ್ಯೂ ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗುವುದಾಗಿ ಟಿಎಂಸಿ ಮುಖ್ಯಸ್ಥ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ