ಬಿಜೆಪಿ ಪ್ರಚಾರಕ್ಕೆ ಸಹಾಯ ಮಾಡಲು ಚುನಾವಣಾ ಆಯೋಗ ಏಳು ಹಂತದ ಚುನಾವಣೆ ನಡೆಸುತ್ತಿದೆ: ಮಮತಾ

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ನಡೆಸಲು ಅನುವು ಮಾಡಿಕೊಡಲು ಕೇಂದ್ರ ಚುನಾವಣಾ ಆಯೋಗ ಏಳು ಹಂತದ ಚುನಾವಣೆ ನಡೆಸುತ್ತಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಮಾಲ್ಡಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ರಾಷ್ಟ್ರದ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ನಡೆಸಲು ಅನುವು ಮಾಡಿಕೊಡಲು ಕೇಂದ್ರ ಚುನಾವಣಾ ಆಯೋಗ ಏಳು ಹಂತದ ಚುನಾವಣೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.

ಇಂದು ಮಾಲ್ಡಾ ಜಿಲ್ಲೆಯ ಗಜೋಲ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಚುನಾವಣೆ ನಿಗದಿಪಡಿಸಲಾಗಿದೆ. ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು "ಪ್ರತಿಪಕ್ಷಗಳನ್ನು ಹತ್ತಿಕ್ಕಲು" ಪ್ರತಿ ಹಂತಕ್ಕೂ ಮೊದಲು ದೇಶಾದ್ಯಂತ ವಿಶೇಷ ವಿಮಾನಗಳಲ್ಲಿ ಪ್ರಯಾಣಿಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

"ಈ ಹಿಂದೆ, ಮೇ ತಿಂಗಳೊಳಗೆ ಚುನಾವಣೆಗಳು ಮುಗಿಯುತ್ತಿದ್ದವು. ಆದರೆ ಈ ವರ್ಷ, ಮೋದಿ ಮಿಲಿಟರಿ ವಿಮಾನಗಳಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಅನುವು ಮಾಡಿಕೊಡುವುದಕ್ಕಾಗಿ ಜೂನ್ 1 ರವರೆಗೆ ಮತದಾನ ವಿಸ್ತರಿಸಲಾಗಿದೆ. ಬಿಜೆಪಿ ನಾಯಕರೂ ಹೆಲಿಕಾಪ್ಟರ್‌ಗಳು ಬುಕ್ ಮಾಡಿದ್ದು, ನಮಗೆ ಹೆಲಿಕಾಪ್ಟರ್ ಗಳೇ ಸಿಗುತ್ತಿಲ್ಲ'' ಎಂದು ಪಶ್ಚಿಮ ಬಂಗಾಳ ಸಿಎಂ ದೂರಿದ್ದಾರೆ.

ಮಮತಾ ಬ್ಯಾನರ್ಜಿ
ಚುನಾವಣಾ ಆಯೋಗದ ಎದುರು 55 ದಿನಗಳ ಉಪವಾಸ ಸತ್ಯಾಗ್ರಹ: ಮಮತಾ ಬ್ಯಾನರ್ಜಿ ಎಚ್ಚರಿಕೆ

ಬಿಸಿಲಿನ ತಾಪದಿಂದ ಜನ ತುಂಬಾ ತೊಂದರೆಗೀಡಾಗಿದ್ದಾರೆ. ಆದರೆ ಅವರು(ಬಿಜೆಪಿ ನಾಯಕರು) ಎಲ್ಲಾ ಸೌಲಭ್ಯಗಳೊಂದಿಗೆ ವಿವಿಐಪಿ ಪ್ರಚಾರ ಮಾಡುತ್ತಿದ್ದು, ಮೋದಿ ವಿಚಲಿತರಾಗಿದ್ದಾರೆ ಎಂದರು.

ಚುನಾವಣೆ ಘೋಷಣೆಯಾದ ನಂತರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಉಸ್ತುವಾರಿಯಾಗಿ ಮುಂದುವರೆದಿರುತ್ತದೆ. ಚುನಾವಣಾ ಆಯೋಗ ಆಡಳಿತ ಯಂತ್ರವನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದ್ದರೂ, "ಮೋದಿ ಮತ್ತು ಅವರ ಪಕ್ಷದ ಸಹೋದ್ಯೋಗಿಗಳ ನಿರ್ದೇಶನದಂತೆ ನಡೆದುಕೊಳ್ಳುತ್ತಿದೆ" ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com