Patanjali Case: ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ದೊಡ್ಡ ಜಾಹಿರಾತು ನೀಡಿ ಕ್ಷಮೆ ಕೋರಿದ Baba Ramdev!

ಪತಂಜಲಿ ಸಂಸ್ಥೆಯ ತಪ್ಪುದಾರಿಗೆಳೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಯೋಗ ಗುರು ಬಾಬಾ ರಾಮ್ ದೇವ್ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದು, ಸಂಸ್ಥೆ ಜಾಹಿರಾತು ನೀಡುತ್ತಿದ್ದ ಅಳತೆಯಲ್ಲೇ ಕ್ಷಮಾಪಣೆ ಪತ್ರದ ಜಾಹಿರಾತು ನೀಡಿದ್ದಾರೆ.
ಬಾಬಾ ರಾಮ್ ದೇವ್ ಕ್ಷಮೆ ಯಾಚನೆ
ಬಾಬಾ ರಾಮ್ ದೇವ್ ಕ್ಷಮೆ ಯಾಚನೆ

ನವದೆಹಲಿ: ಪತಂಜಲಿ ಸಂಸ್ಥೆಯ ತಪ್ಪುದಾರಿಗೆಳೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಯೋಗ ಗುರು ಬಾಬಾ ರಾಮ್ ದೇವ್ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದು, ಸಂಸ್ಥೆ ಜಾಹಿರಾತು ನೀಡುತ್ತಿದ್ದ ಅಳತೆಯಲ್ಲೇ ಕ್ಷಮಾಪಣೆ ಪತ್ರದ ಜಾಹಿರಾತು ನೀಡಿದ್ದಾರೆ.

ಹೌದು.. ತಪ್ಪುದಾರಿಗೆಳೆಯುವ ಜಾಹೀರಾತು (Advertisements) ಪ್ರಕರಣದಲ್ಲಿ ಪತಂಜಲಿ ಆಯುರ್ವೇದ (Patanjali Ayurved) ಸಂಸ್ಥೆ ಹಾಗೂ ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್‌ (Baba Ramdev) ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ಚಾಟಿ ಬೀಸಿ, ಕ್ಷಮೆಯಾಚನೆಯ ಜಾಹೀರಾತು ಪ್ರಕಟಿಸಬೇಕು ಎಂದು ಸೂಚಿಸಿತ್ತು.

ಅದರಂತೆ ನಿನ್ನೆಯೇ ಪತಂಜಲಿ ಸಂಸ್ಥೆ ಪತ್ರಿಕೆಗಳಲ್ಲಿ ಕ್ಷಮಾಪಣೆ ಕೋರಿತ್ತು. ಆದರೆ ಅದರ ಗಾತ್ರವು ಅದರ ಔಷಧಗಳ ದಾರಿತಪ್ಪಿಸುವ ಜಾಹೀರಾತುಗಳಷ್ಟು ದೊಡ್ಡದಾಗಿದೆಯೇ ಎಂದು ನ್ಯಾಯಾಲಯ ಕೇಳಿತ್ತು.

ಬಾಬಾ ರಾಮ್ ದೇವ್ ಕ್ಷಮೆ ಯಾಚನೆ
'ಬಾಬಾ ರಾಮ್ ದೇವ್ ಕ್ಷಮೆ ಯಾಚಿಸಿದ ಜಾಹಿರಾತುಗಳನ್ನು ಕಡತಕ್ಕೆ ಸೇರಿಸಿ': ಸುಪ್ರೀಂ ಕೋರ್ಟ್!

ಕೋರ್ಟ್ ಅಸಮಾಧಾನ

ನಿನ್ನೆ ಪ್ರಕಟವಾದ ಜಾಹೀರಾತಿನಲ್ಲಿ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅವರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರಲಿಲ್ಲ. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ. ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ಕ್ಷಮೆಯಾಚನೆಯನ್ನು ಪ್ರಮುಖವಾಗಿ ಪ್ರಕಟಿಸಲಾಗಿದೆಯೇ ಎಂದು ಕೇಳಿತ್ತು.

“ಕ್ಷಮೆಯಾಚನೆಯನ್ನು ಪ್ರಮುಖವಾಗಿ ಪ್ರಕಟಿಸಲಾಗಿದೆಯೇ? ನಿಮ್ಮ ಹಿಂದಿನ ಜಾಹೀರಾತುಗಳ ಗಾತ್ರದಲ್ಲಿದಲ್ಲಿದೆಯೇ?” ಎಂದು ನ್ಯಾಯಮೂರ್ತಿ ಕೊಹ್ಲಿ ಪ್ರಶ್ನಿಸಿದ್ದರು.

ರಾಮದೇವ್ ಮತ್ತು ಬಾಲಕೃಷ್ಣ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, 10 ಲಕ್ಷ ರೂ.ಗಳ ವೆಚ್ಚದಲ್ಲಿ 67 ಪತ್ರಿಕೆಗಳಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದರು. ಇದರಿಂದ ಸಮಾಧಾನಗೊಳ್ಳದ ನ್ಯಾಯಮೂರ್ತಿ ಕೊಹ್ಲಿ ಅವರು, “ದಯವಿಟ್ಟು ಪ್ರಕಟವಾದ ಜಾಹೀರಾತುಗಳನ್ನು ತೋರಿಸಿ. ನಾವು ನಿಜವಾದ ಗಾತ್ರವನ್ನು ನೋಡಲು ಬಯಸುತ್ತೇವೆ.

ನೀವು ಜಾಹೀರಾತನ್ನು ನೀಡಿದಾಗ ನಾವು ಅದನ್ನು ಸೂಕ್ಷ್ಮದರ್ಶಕದಿಂದ ನೋಡಬೇಕೆ?ʼʼ ಎಂದು ಕೇಳಿದ್ದರು. ಈ ವಿಷಯದ ಮುಂದಿನ ವಿಚಾರಣೆ ಏಪ್ರಿಲ್ 30ರಂದು ಮತ್ತೆ ನಡೆಯಲಿದ್ದು, ರಾಮ್ ದೇವ್ ಮತ್ತು ಬಾಲಕೃಷ್ಣ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಪತ್ರಿಕೆಯ ಪುಟದ ನಾಲ್ಕನೇ ಒಂದು ಭಾಗದಲ್ಲಿ 'ಕ್ಷಮೆ' ಜಾಹಿರಾತು

ಹೀಗಾಗಿ ಪತಂಜಲಿ ಸಂಸ್ಥೆ ಇಂದು ಮತ್ತೆ ಕ್ಷಮಾಪಣಾ ಪತ್ರದ ಜಾಹಿರಾತು ನೀಡಿದ್ದು, ಇದು ಪತ್ರಿಕೆಯ ಪುಟದ ನಾಲ್ಕನೇ ಒಂದು ಭಾಗವನ್ನು ಒಳಗೊಂಡಿದೆ ಮತ್ತು ʼಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆʼ ಎಂಬ ಶೀರ್ಷಿಕೆಯನ್ನು ಹೊಂದಿದೆ.

ಕ್ಷಮಾಪಣಾ ಪತ್ರದಲ್ಲಿ ಭಾರತದ ಸುಪ್ರೀಂ ಕೋರ್ಟ್‌ ನಿರ್ದೇಶನಗಳು / ಆದೇಶಗಳ ಅನುಸರಣೆ ಅಥವಾ ಅವಿಧೇಯತೆಗಾಗಿ ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅವರು ವೈಯಕ್ತಿಕವಾಗಿ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆ ಪರವಾಗಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ 2023ರ ನವೆಂಬರ್‌ 22ರಂದು ನಡೆಸಿದ ಸಭೆ / ಪತ್ರಿಕಾಗೋಷ್ಠಿಗಾಗಿ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ. ನಮ್ಮ ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮಾಡಿದ ತಪ್ಪಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಅಂತಹ ತಪ್ಪುಗಳು ಪುನರಾವರ್ತನೆಯಾಗುವುದಿಲ್ಲ.

ಗೌರವಾನ್ವಿತ ನ್ಯಾಯಾಲಯದ ನಿರ್ದೇಶನಗಳು ಮತ್ತು ಸೂಚನೆಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪಾಲಿಸಲು ನಾವು ಬದ್ಧರಾಗಿದ್ದೇವೆ. ನ್ಯಾಯಾಲಯದ ಘನತೆಯನ್ನು ಎತ್ತಿಹಿಡಿಯಲು ಮತ್ತು ನ್ಯಾಯಾಲಯ / ಸಂಬಂಧಿತ ಪ್ರಾಧಿಕಾರಗಳ ಅನ್ವಯವಾಗುವ ಕಾನೂನುಗಳು ಮತ್ತು ನಿರ್ದೇಶನಗಳನ್ನು ಅನುಸರಿಸುತ್ತೇವೆ ಎಂದೂ ಅವರು ಜಾಹೀರಾತಿನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com