ಉತ್ತರ ಪ್ರದೇಶದ ಜೌನ್ ಪುರ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀರಾಮ್ ಘೋಷಣೆ, ಭಾರತೀಯ ಕ್ರಿಕೆಟಿಗರ ಹೆಸರುಗಳನ್ನು ಬರೆದಿದ್ದು ಉತ್ತೀರ್ಣರಾಗಿದ್ದಾರೆ.
ಆರ್ ಟಿಐ ನಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಈ ರೀತಿ ಬರೆದ ನಾಲ್ವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ನಾಲ್ವರು ಪ್ರೊಫೆಸರ್ ಗಳನ್ನು ಅಮಾನತುಗೊಳಿಸಲಾಗಿದೆ.
ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿವಿಯ ಉಪಕುಲಪತಿ ಡಾ. ವಂದನಾ ಸಿಂಗ್ ಮಾತನಾಡಿ ಈ ವಿಷಯವಾಗಿ ಸಭೆಯನ್ನು ಕರೆಯಲಾಗಿತ್ತು. ಇಬ್ಬರು ಪ್ರಾಧ್ಯಾಪಕರಾದ ಡಾ. ಅಶುತೋಷ್ ಗುಪ್ತಾ ಹಾಗೂ ಡಾ. ವಿನಯ್ ವರ್ಮಾ ತಪ್ಪು ಮೌಲ್ಯಮಾಪನ ಮಾಡಿದ್ದು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲು ಶಿಸ್ತು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಅಂತಿಮ ನಿರ್ಧಾರಕ್ಕಾಗಿ ಅದನ್ನು ಕಾರ್ಯಕಾರಿ ಮಂಡಳಿಯ ಮುಂದೆ ಮಂಡಿಸಲಾಗುವುದು ಎಂದು ಡಾ. ವಂದನಾ ಸಿಂಗ್ ತಿಳಿಸಿದ್ದಾರೆ. ನಾಲ್ವರು ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಪ್ರಾಧ್ಯಾಪಕರು ಸುಲಿಗೆ ಮಾಡಿದ ಆರೋಪದ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
Advertisement