
ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 291ಕ್ಕೂ ಅಧಿಕ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕೇರಳದ ವಯನಾಡು ಇದೀಗ ಭೀಕರ ಭೂಕುಸಿತದ ಬಳಿಕ ಸಾವಿನ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತಪಟ್ಟವರ ಸಂಖ್ಯೆ ಈಗ 291ಕ್ಕೆ ಏರಿಕೆಯಾಗಿದ್ದು, ಇನ್ನೂ ಸುಮಾರು 200 ಜನ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಿಗಾಗಿ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನದಿಗಳಲ್ಲಿ, ಬೆಟ್ಟ ಕುಸಿತದ ಅವಶೇಷಗಳ ಅಡಿಯಲ್ಲಿ ಶವಗಳು ಸಿಗುತ್ತಿವೆ.
ಭಾರಿ ಮಳೆಯ ಬಳಿಕ ವಯನಾಡಿನ ಸುಮಾರು 80 ಸಾವಿರ ಚದರ ಮೀಟರ್ ಭೂಮಿಯು ಕುಸಿದಿದ್ದು, ಸುಮಾರು 8 ಕಿಲೋಮೀಟರ್‌ವರೆಗೆ ಅವಶೇಷವು ಹರಿದುಕೊಂಡು ಹೋಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.
ವಯನಾಡ್ ಜಿಲ್ಲಾಡಳಿತದ ಪ್ರಕಾರ, ಮೃತರಲ್ಲಿ 27 ಮಕ್ಕಳು ಮತ್ತು 76 ಮಹಿಳೆಯರು ಸೇರಿದ್ದಾರೆ. 225 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಂತ್ರಸ್ಥರು ಹೆಚ್ಚಾಗಿ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ ಎಂದು ಹೇಳಲಾಗಿದೆ.
ಅಂತೆಯೇ ಭೂಕುಸಿತ ಸಂಭವಿಸಿದ ವಯನಾಡಿನಲ್ಲಿ 4 ಸಚಿವರು ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಕಂದಾಯ ಸಚಿವ ಕೆ ರಾಜನ್, ಅರಣ್ಯ ಸಚಿವ ಎ ಕೆ ಶಸೀಂದ್ರನ್, ಪಿಡಬ್ಲ್ಯೂಡಿ ಮತ್ತು ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ಮತ್ತು ಎಸ್‌ಸಿ/ಎಸ್‌ಟಿ ಇಲಾಖೆ ಸಚಿವ ಒ ಆರ್ ಕೇಲು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ.
ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, "ಈ ವರೆಗೆ 256 ಶವಪರೀಕ್ಷೆಗಳನ್ನು ಮಾಡಲಾಗಿದೆ. 154 ಶವಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ, ನಿಲಂಬೂರ್ ಮತ್ತು ಪೋತುಕಲ್‌ನಲ್ಲಿ ಪತ್ತೆಯಾದ ಶವಗಳನ್ನು ಸಹ ಹೊರತೆಗೆಯಲಾಗಿದೆ ಮತ್ತು ಶವಪರೀಕ್ಷೆ ಪೂರ್ಣಗೊಂಡಿದೆ" ಎಂದು ಹೇಳಿದರು.
Advertisement