
ನವದೆಹಲಿ: ನೀಟ್-ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸಲು ಅದರ ಪಾವಿತ್ರ್ಯತೆಗೆ ಧಕ್ಕೆಯಾಗುವಂತಹ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ವಿವಾದಗಳನ್ನು ತಡೆಯಲು ಸಂಪೂರ್ಣ ಪುರಾವೆ ಮತ್ತು ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಸಲು ನಿಷ್ಪಕ್ಷಪಾತ ಮತ್ತು ದೃಢವಾದ ವ್ಯವಸ್ಥೆಯನ್ನು ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಗೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಪೀಠ ಶುಕ್ರವಾರ ನೀಟ್-ಯುಜಿ 2024ಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿದೆ.
ಪ್ರಶ್ನೆಪತ್ರಿಕೆಗಳನ್ನು ತಯಾರಿಸುವುದರಿಂದ ಹಿಡಿದು ಕಠಿಣ ಪರಿಶೀಲನೆಗಳನ್ನು ಖಚಿತಪಡಿಸಿಕೊಳ್ಳಲು, ನಿರ್ವಹಣೆ, ಸಂಗ್ರಹಣೆ ಇತ್ಯಾದಿಗಳನ್ನು ಪರಿಶೀಲಿಸಲು ಶಿಷ್ಠಾಚಾರಗಳನ್ನು ನೇರ ಪ್ರಸಾರ ಮಾಡಿ ಪಾರದರ್ಶಕತೆ ತರಲು, ವಿವಿಧ ಹಂತಗಳಲ್ಲಿ ಗುರುತಿನ ಪರಿಶೀಲನೆಗಳನ್ನು ವರ್ಧಿಸಲು, ಗೌಪ್ಯತೆ ಕಾನೂನನ್ನು ಗಣನೆಗೆ ತೆಗೆದುಕೊಳ್ಳುವಂತೆ ಸಹ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಎನ್‌ಟಿಎ ನೀಟ್-ಯುಜಿ 2024 ಪರೀಕ್ಷೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇಂತಹ ಎಡವಟ್ಟುಗಳನ್ನು ತಪ್ಪಿಸಬೇಕು. ರಾಷ್ಟ್ರೀಯ ಪರೀಕ್ಷೆಯಲ್ಲಿ ಇಂತಹ ತಪ್ಪುಗಳಾದರೆ ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆಯುಂಟಾಗುತ್ತದೆ ಎಂದರು.
ನೀಟ್ ಯುಜಿ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಬಗ್ಗೆ ಪರಿಶೀಲಿಸಲು ಸರ್ಕಾರವು ರಚಿಸಿರುವ ಕೆ ರಾಧಾಕೃಷ್ಣನ್ ತಜ್ಞರ ಸಮಿತಿಯ ವ್ಯಾಪ್ತಿಯನ್ನು ವಿಸ್ತರಿಸಿದ ಸುಪ್ರೀಂ ಕೋರ್ಟ್, ಪರೀಕ್ಷಾ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿ ದೃಢವಾಗಿ ನಡೆಯಲು ಸಮಿತಿಯು ಏಳು ಹಂತಗಳನ್ನು ಒಳಗೊಳ್ಳಬೇಕು ಎಂದು ಹೇಳಿದೆ.
ಏಳು ಹಂತಗಳು: 1) ಮೌಲ್ಯಮಾಪನ ಸಮಿತಿ
2) ಪ್ರಮಾಣಿಕ ಕಾರ್ಯಾಚರಣೆ ವಿಧಾನ(SOP)
3) ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸುವ ಪ್ರಕ್ರಿಯೆ ಪರಿಶೀಲನೆ
4) ವರ್ಧಿತ ಗುರುತಿನ ಪರಿಶೀಲನೆಗಳ ಪ್ರಕ್ರಿಯೆಗಳು
5) ಪರೀಕ್ಷಾ ಕೇಂದ್ರಗಳ ಸುತ್ತ ಸಿಸಿಟಿವಿ ಮೇಲ್ವಿಚಾರಣೆ
6) ಪ್ರಶ್ನೆಪತ್ರಿಕೆಗಳಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳಲು ಸುರಕ್ಷಿತ ಲಾಜಿಸ್ಟಿಕ್ ಪೂರೈಕೆದಾರರು
7) ದೃಢ ದೂರು ಪರಿಹಾರ ಕಾರ್ಯವಿಧಾನಗಳ ಶಿಫಾರಸು
ಹೈಕೋರ್ಟ್ ಮೊರೆ ಹೋಗಬಹುದು: ಸಂಪೂರ್ಣ ಪ್ರಕ್ರಿಯೆಯ ಗುರಿ ಮತ್ತು ಉದ್ದೇಶ ಪರೀಕ್ಷೆಯಲ್ಲಿ ಯಾವುದೇ ದುಷ್ಕೃತ್ಯವನ್ನು ತಡೆಯುವುದು ಮತ್ತು ಪತ್ತೆ ಹಚ್ಚುವುದಾಗಿದೆ. ತಜ್ಞರ ಸಮಿತಿಯು ಪರೀಕ್ಷಾ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದ ಸುಪ್ರೀಂ ಕೋರ್ಟ್, ಯಾವುದೇ ವಿದ್ಯಾರ್ಥಿಯು ತೀರ್ಪಿನಲ್ಲಿ ಪರಿಹರಿಸಲಾದ ಸಮಸ್ಯೆಗಳಿಗೆ ಸಂಬಂಧಿಸದೆ ಯಾವುದೇ ರೀತಿಯ ವೈಯಕ್ತಿಕ ದೂರುಗಳನ್ನು ಹೊಂದಿದ್ದರೆ, ಅವರು ಆಯಾ ರಾಜ್ಯಗಳ ಹೈಕೋರ್ಟ್ ಮೊರೆ ಹೋಗಬಹುದು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದು ಪುನರುಚ್ಛರಿಸಿದ ಸುಪ್ರೀಂ ಕೋರ್ಟ್, ಸೋರಿಕೆಯು ಪಾಟ್ನಾ ಮತ್ತು ಹಜಾರಿಬಾಗ್‌ಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದೆ.
ಈಗಾಗಲೇ ಜುಲೈ 24ರಿಂದ ಕೌನ್ಸೆಲಿಂಗ್ ಆರಂಭವಾಗಿದೆ.
Advertisement