ತಿರುವನಂತಪುರಂ: ವಯನಾಡ್ ಜಿಲ್ಲೆಯ ಮುಂಡಕೈ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಿಂದ ನಿರಾಶ್ರಿತರಾದವರಿಗೆ ಕೇರಳ ಸರ್ಕಾರ ಟೌನ್ ಶಿಪ್ ನ್ನು ಘೋಷಿಸಿದೆ.
ಸುರಕ್ಷಿತ ಪ್ರದೇಶದಲ್ಲಿ ಟೌನ್ ಶಿಪ್ ನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ತಿರುವನಂತ ಪುರಂ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ವಿಜಯನ್, ನಿರಾಶ್ರಿತರಿಗೆ ಪುನರ್ವಸತಿ ಪ್ರಕ್ರಿಯೆ ಬಗ್ಗೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ, ತ್ವರಿತಗತಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಾಗತಿಕ ಸಮುದಾಯದಿಂದ ಮನೆ ನಿರ್ಮಾಣ ಭೂಮಿ ನೀಡುವುದಕ್ಕಾಗಿ ಪ್ರಸ್ತಾವನೆಗಳು ಬಂದಿವೆ ಎಂದು ವಿಜಯನ್ ಹೇಳಿದ್ದಾರೆ.
ಈ ಕೊಡುಗೆಗಳನ್ನು ಸಮನ್ವಯಗೊಳಿಸಲು ಜಂಟಿ ಭೂ ಕಂದಾಯ ಆಯುಕ್ತ ಎ ಗೀತಾ ಐಎಎಸ್ ಅಡಿಯಲ್ಲಿ 'ಹೆಲ್ಪ್ ಫಾರ್ ವಯನಾಡ್' ಕೋಶವನ್ನು ರಚಿಸಲಾಗಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಶಿಕ್ಷಣ ಸಚಿವರು ವಯನಾಡಿಗೆ ಭೇಟಿ ನೀಡಲಿದ್ದಾರೆ ಎಂದು ವಿಜಯನ್ ತಿರುವನಂತಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಂದಿರುವ ಕೊಡುಗೆಗಳನ್ನು ವಿವರಿಸಿದ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಪುನರ್ವಸತಿಗಾಗಿ 100 ಮನೆಗಳನ್ನು ನಿರ್ಮಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ತಿಳಿಸಿದ್ದಾರೆ. ಈ ಪೈಕಿ 25 ಮನೆಗಳ ಉಸ್ತುವಾರಿಯನ್ನು ನೇರವಾಗಿ ಸತೀಶನ್ ನೋಡಿಕೊಳ್ಳಲಿದ್ದಾರೆ ಎಂದು ವಿಜಯನ್ ತಿಳಿಸಿದ್ದಾರೆ
"ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಕೃತಜ್ಞತೆ ಸಲ್ಲಿಸಲು ನಾನು ಅವರಿಗೆ ಕರೆ ಮಾಡಿದ್ದೇನೆ" ಎಂದು ಕೇರಳ ಸಿಎಂ ಹೇಳಿದ್ದಾರೆ.
ಸೋಭಾ ರಿಯಾಲ್ಟಿ ಗ್ರೂಪ್ ಮತ್ತು ಕೋಝಿಕ್ಕೋಡ್ ಮೂಲದ ಬ್ಯುಸಿನೆಸ್ ಕ್ಲಬ್ ತಲಾ 50 ಮನೆಗಳನ್ನು ನಿರ್ಮಿಸಲು ಮುಂದಾಗಿವೆ ಎಂದು ಅವರು ಹೇಳಿದರು.
Advertisement