
ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆ ಮತ್ತು ಹಿಂಸಾಚಾರದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಮಂಗಳವಾರ ನಡೆದ ಮಹತ್ವದ ಸರ್ವಪಕ್ಷ ಸಭೆಯಲ್ಲಿ ಬಾಂಗ್ಲಾದೇಶ ಉಚ್ಛಾಟಿತ ಪ್ರಧಾನಿ Sheikh Hasinaಗೆ ಭಾರತದ ನೆರವು ನೀಡುವ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಸೋಮವಾರ ಸಂಜೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತ ಸಕಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದು, ಮುಂದಿನ ಕ್ರಮವನ್ನು ನಿರ್ಧರಿಸಲು ಸಮಯ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸತ್ ಭವನದಲ್ಲಿ ಎಲ್ಲ ರಾಜಕೀಯ ಪಕ್ಷದ ನಾಯಕರಿಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ''ಬಾಂಗ್ಲಾದೇಶದಲ್ಲಿರುವ 10,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಬಾಂಗ್ಲಾದೇಶ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಸಂಸತ್ತಿನಲ್ಲಿ ನಡೆದ ಸರ್ವಪಕ್ಷ ಸಭೆಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ಸರ್ವಾನುಮತದ ಬೆಂಬಲ ಮತ್ತು ಈ ವೇಳೆ ಕೈಗೊಂಡ ನಿರ್ಣಯಗಳು ಮತ್ತು ತಿಳುವಳಿಕೆಯನ್ನು ಶ್ಲಾಘಿಸುತ್ತೇನೆ" ಎಂದು ಸಭೆಯ ನಂತರ ಜೈಶಂಕರ್ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ, ''ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಸರ್ಕಾರ ಸರ್ವಪಕ್ಷ ಸಭೆಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ಸರ್ಕಾರದ ಜೊತೆಗಿದೆ" ಎಂದು ಚಿದಂಬರಂ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆದರೆ ಇಂದಿನ ಸಭೆಗೆ ಕಾರ್ತಿ ಚಿದಂಬರಂ ಗೈರಾಗಿದ್ದರು.
ಇನ್ನು ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಡಿಎಂಕೆ ನಾಯಕ ಟಿಆರ್ ಬಾಲು, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ವಿದೇಶಾಂಗ ನೀತಿಯ ಭವಿಷ್ಯದ ಬಗ್ಗೆ ರಾಹುಲ್ ಗಾಂಧಿ ಕಳವಳ
ಇನ್ನು ಇದೇ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಲೋಕಸಭೆ ವಿಫಕ್ಷ ನಾಯಕ ರಾಹುಲ್ ಗಾಂಧಿ ವಿದೇಶಾಂಗ ನೀತಿಯ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿಶೇಷವಾಗಿ ಬಾಂಗ್ಲಾದೇಶದಲ್ಲಿನ ಇತ್ತೀಚಿನ ಘಟನೆಗಳ ಕುರಿತು ಕೇಂದ್ರ ಸರ್ಕಾರದಿಂದ ಮಾಹಿತಿ ಪಡೆದ ರಾಹುಲ್ ಗಾಂಧಿ 'ರಾಷ್ಟ್ರೀಯ ಹಿತಾಸಕ್ತಿಗಾಗಿ ಕೈಗೊಂಡ ಕ್ರಮಗಳಿಗೆ ತಮ್ಮ ಬೆಂಬಲ'ವನ್ನು ವ್ಯಕ್ತಪಡಿಸಿದರು. ಅಂತೆಯೇ ಈ ಘಟನೆಯಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆಯೇ ಎಂದು ಪ್ರಶ್ನಿಸಿದರು. ಅವರ ಆಸ್ತಿಗಳ ಮೇಲಿನ ದಾಳಿಯ ವರದಿಗಳೊಂದಿಗೆ ಅಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯು ಗಮನಾರ್ಹ ಕಳವಳಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
Advertisement