
ನರ್ಮದ: ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿರುವ ಏಕತೆಯ ಪ್ರತಿಮೆ (Statue of Unity) ಬಳಿ ಗುಂಪು ದಾಳಿ ನಡೆದಿದ್ದು, ಇಬ್ಬರು ಬುಡಕಟ್ಟು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಏಕತೆಯ ಪ್ರತಿಮೆಯ ಬಳಿ ನಿರ್ಮಾಣ ಹಂತದಲ್ಲಿರುವ ಟ್ರೈಬಲ್ ಮ್ಯೂಸಿಯಂ ಬಳಿ ಈ ಘಟನೆ ನಡೆದಿದ್ದು, ಕಳ್ಳತನ ಮಾಡಲು ಬಂದಿದ್ದಾರೆಂಬ ಶಂಕೆಯಲ್ಲಿ ಇಬ್ಬರನ್ನು ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆ.06 ರಂದು ರಾತ್ರಿ ಈ ಘಟನೆ ನಡೆದಿದ್ದು, ಜಯೇಶ್ ತದ್ವಿ ಮತ್ತು ಸಂಜಯ್ ತದ್ವಿ ಮೃತ ದುರ್ದೈವಿಗಳು ಎಂದು ನರ್ಮದಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಸುಂಬೆ ತಿಳಿಸಿದ್ದಾರೆ.
"ಆರು ಮಂದಿ ಕಟ್ಟಡ ಕಾರ್ಮಿಕರ ಗುಂಪು ಕೆವಾಡಿಯಾ ನಿವಾಸಿ ಜಯೇಶ್ ಮತ್ತು ಸಮೀಪದ ಗಭಾನ್ ಗ್ರಾಮದ ಸಂಜಯ್ ಅವರನ್ನು ಕಟ್ಟಿಹಾಕಿ ಥಳಿಸಿದ್ದಾರೆ. ಜಯೇಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸಂಜಯ್ ಇಂದು ಬೆಳಿಗ್ಗೆ ರಾಜ್ಪಿಪ್ಲಾದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು" ಎಂದು ಎಸ್ಪಿ ಹೇಳಿದ್ದಾರೆ.
"ಸಂಜಯ್ ತದ್ವಿ ಅವರು ಮರಣದ ವೇಳೆ ನೀಡಿರುವ ಹೇಳಿಕೆಯ ಪ್ರಕಾರ, ಸಂಜಯ್ ಮತ್ತು ಜಯೇಶ್ ಕೃಷಿ ಕಾರ್ಮಿಕರಾಗಿದ್ದು, ಮಾರಾಟ ಮಾಡಲು ಕೆಲವು ಲೋಹದ ಅವಶೇಷಗಳನ್ನು ಕದಿಯುವುದಕ್ಕಾಗಿ ರಾತ್ರಿಯಲ್ಲಿ ನಿರ್ಮಾಣ ಸ್ಥಳಕ್ಕೆ ಪ್ರವೇಶಿಸಿದ್ದರು. ಅವರನ್ನು ಹಿಡಿದು ನಂತರ ಥಳಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರು ಜನರನ್ನು ನಾವು ಬಂಧಿಸಿದ್ದೇವೆ. ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ,'' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement