
ನವದೆಹಲಿ: ಬಾಂಗ್ಲಾದೇಶದ ಬೆಳವಣಿಗೆಗಳ ಬಗ್ಗೆ ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಅವರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾತುಕತೆ ನಡೆಸಿದ್ದಾರೆ.
ಭಾರತದಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಬ್ರಿಟನ್ ನಲ್ಲಿ ರಾಜಕೀಯ ಆಶ್ರಯ ಪಡೆಯುವುದಕ್ಕೆ ಯೋಜಿಸುತ್ತಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಬೆಳವಣಿಗೆಯಾಗಿರುವುದು ಕುತೂಹಲ ಮೂಡಿಸಿದೆ.
ಕೆಲವೇ ಗಂಟೆಗಳ ಹಿಂದೆ ವಿದೇಶಾಂಗ ಸಚಿವರು, ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಅವರೊಂದಿಗೆ ಮಾತನಾಡಿದರು. ಉಭಯ ನಾಯಕರ ಮಾತುಕತೆಯಲ್ಲಿ ಬಾಂಗ್ಲಾದೇಶ ಹಾಗೂ ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಶೇಖ್ ಹಸೀನಾ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಭಾರತ ಸರ್ಕಾರವಾಗಲೀ, ಬ್ರಿಟನ್ ಸರ್ಕಾರವಾಗಲೀ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ದೇಶದ ವಲಸೆ ನಿಯಮಗಳು ನಿರ್ದಿಷ್ಟವಾಗಿ ವ್ಯಕ್ತಿಗಳು ಬ್ರಿಟನ್ ಗೆ ಆಶ್ರಯ ಪಡೆಯಲು ಪ್ರಯಾಣಿಸಲು ಅನುಮತಿಸುವುದಿಲ್ಲ ಎಂದು ಬ್ರಿಟನ್ ಗೃಹ ಕಚೇರಿ ಮೂಲಗಳು ತಿಳಿಸಿವೆ.
ಈ ವಾರದ ಆರಂಭದಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಜೈಶಂಕರ್, ಹಸೀನಾ ಅವರು ಭಾರತಕ್ಕೆ ಬರಲು ಅನುಮತಿ ಕೋರಿದ್ದಾರೆ ಎಂದು ತಿಳಿಸಿದ್ದರು.
ಸರ್ಕಾರಿ ಉದ್ಯೋಗಗಳಿಗಾಗಿ ವಿವಾದಾತ್ಮಕ ಕೋಟಾ ವ್ಯವಸ್ಥೆಯು ಗದ್ದಲದ ಪ್ರತಿಭಟನೆಗಳು ಮತ್ತು ಹಿಂಸಾಚಾರವನ್ನು ಕಂಡ ನಂತರ ಬಾಂಗ್ಲಾದೇಶ ಅಸ್ಥಿರತೆಯಲ್ಲಿ ಮುಳುಗಿತು. ಘಟನೆಗಳಲ್ಲಿ 550 ಕ್ಕೂ ಹೆಚ್ಚು ಜನರು ಸತ್ತರು ಮತ್ತು ನೂರಾರು ಜನರು ಗಾಯಗೊಂಡರು. ಹಸೀನಾ ಸರ್ಕಾರದ ಪತನದ ನಂತರ, ನೆರೆಯ ದೇಶದಲ್ಲಿ ವ್ಯಾಪಕ ಲೂಟಿ ಮತ್ತು ಗಲಭೆಗಳು ವರದಿಯಾಗಿವೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳು ಮತ್ತು ದೇವಾಲಯಗಳ ಮೇಲೆ ದಾಳಿಗಳು ಭಾರತಕ್ಕೆ ವಿಶೇಷವಾಗಿ ಕಳವಳಕಾರಿಯಾಗಿದೆ. ಈ ವಿಷಯದ ಕುರಿತು ಮಾತನಾಡಿದ MEA ವಕ್ತಾರರು, ಅಲ್ಪಸಂಖ್ಯಾತರ ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದ ಗುಂಪುಗಳು ಮತ್ತು ಸಂಸ್ಥೆಗಳಿಂದ ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
Advertisement