
ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಯಾವಾಗ ಭಾರತವನ್ನು ತೊರೆಯುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.
ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳ ನೇತೃತ್ವದ ಹಿಂಸಾತ್ಮಕ ದಂಗೆಯ ನಂತರ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದು ಭಾರತಕ್ಕೆ ಬಂದಿದ್ದಾರೆ. ಅವರ ಯೋಜನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯ ವರದಿಗಳ ಕುರಿತು ಪ್ರತಿಕ್ರಿಯಿಸಿದ MEA ವಕ್ತಾರರು, ಭಾರತ ಅಲ್ಲಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದರು.
ಭಾರತೀಯ ರಾಯಭಾರ ಕಚೇರಿಗಳು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಆ ದೇಶದಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ ಎಂದು ಅವರು ತಿಳಿಸಿದರು.
ಆಶ್ರಯಕ್ಕಾಗಿ ಹಸೀನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ ಮತ್ತು ಅವರ ಅಧಿಕೃತ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಇದರಿಂದಾಗಿ ಅವರು ಭಾರತದಲ್ಲಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಲು ಮನವಿ ಮಾಡಿದ್ದಾರೆ.
ನಾಗರಿಕ ದಂಗೆಯಲ್ಲಿ ಬೆಂದುಹೋಗಿರುವ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಲು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಇಂದು ಪ್ಯಾರಿಸ್‌ನಿಂದ ಬಾಂಗ್ಲಾದೇಶಕ್ಕೆ ಮರಳಿದ್ದಾರೆ.
Advertisement