ಚಂಡೀಗಢ: ಈ ಸ್ವಾತಂತ್ರ್ಯ ದಿನಾಚರಣೆಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇನ್ನು ಮುಂದೆ 'ಗುಡ್ ಮಾರ್ನಿಂಗ್' ಬದಲಿಗೆ 'ಜೈ ಹಿಂದ್' ಹೇಳುಬೇಕು ಎಂದು ಹರಿಯಾಣ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹರಿಯಾಣ ಸರ್ಕಾರದ ಈ ಕ್ರಮವು ವಿದ್ಯಾರ್ಥಿಗಳಲ್ಲಿ "ಆಳವಾದ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ" ಭಾವನೆಯನ್ನು ಮೂಡಿಸುವ ಗುರಿ ಹೊಂದಿದೆ ಎಂದು ಶಾಲಾ ಶಿಕ್ಷಣ ನಿರ್ದೇಶನಾಲಯ ಗುರುವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
'ಜೈ ಹಿಂದ್' ಅನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸುಭಾಸ್ ಚಂದ್ರ ಬೋಸ್ ಅವರು ಬಳಸಿದ ಘೋಷಣೆ ಮತ್ತು ಸ್ವಾತಂತ್ರ್ಯದ ನಂತರ ಸಶಸ್ತ್ರ ಪಡೆಗಳಲ್ಲಿ ಅದನ್ನು ಸೆಲ್ಯೂಟ್ ಆಗಿ ಅಳವಡಿಸಲಾಯಿತು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಶಾಲಾ ಶಿಕ್ಷಣ ನಿರ್ದೇಶನಾಲಯವು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಬ್ಲಾಕ್ ಶಿಕ್ಷಣಾಧಿಕಾರಿಗಳು, ಬ್ಲಾಕ್ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಿದೆ.
ಸುತ್ತೋಲೆಯ ಪ್ರಕಾರ, ಶಾಲೆಗಳಲ್ಲಿ 'ಗುಡ್ ಮಾರ್ನಿಂಗ್' ಬದಲಿಗೆ 'ಜೈ ಹಿಂದ್' ಹೇಳಬೇಕು. ಇದರಿಂದಾಗಿ ವಿದ್ಯಾರ್ಥಿಗಳು "ರಾಷ್ಟ್ರೀಯ ಏಕತೆಯ ಉತ್ಸಾಹದಿಂದ ಪ್ರತಿದಿನ ಪ್ರೇರಿತರಾಗಬಹುದು" ಮತ್ತು ದೇಶದ "ಶ್ರೀಮಂತ ಇತಿಹಾಸಕ್ಕೆ ಗೌರವ" ನೀಡಬಹುದು.
ದೇಶಭಕ್ತಿಯ ಈ ಶುಭಾಶ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳನ್ನು ಶ್ಲಾಘಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ ಎಂದು ಅದು ಹೇಳಿದೆ.
Advertisement