
ನವದೆಹಲಿ: ರಾಜ್ಯಸಭೆಯಲ್ಲಿ ಮತ್ತೆ ''Jaya Amitabh Bachchan'' ಗದ್ದಲವೇರ್ಪಟ್ಟಿದ್ದು, ರಾಜ್ಯಸಭಾ ಅಧ್ಯಕ್ಷ Jagdeep Dhankhar ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷಗಳು ಸಭಾತ್ಯಾಗ ಮಾಡಿವೆ.
ಹೌದು... ''Jaya Amitabh Bachchan'' ಹೆಸರಿನ ವಿಚಾರವಾಗಿ ಇಂದು ಮತ್ತೆ ರಾಜ್ಯಸಭೆಯಲ್ಲಿ ಸ್ಪೀಕರ್ ಜಗದೀಪ್ ಧಂಖರ್ ಮತ್ತು ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪರಸ್ಪರ ಜಟಾಪಟಿ ನಡೆಸಿದ್ದು, ಕೆಲಹೊತ್ತು ಮಾತಿನ ಚಕಮಕಿ ಕೂಡ ನಡೆದಿದೆ.
ಘನಶ್ಯಾಮ್ ತಿವಾರಿ ಅವರು ಕೆಲವು ದಿನಗಳ ಹಿಂದೆ ವಿಪಕ್ಷ ನಾಯಕರ ಕುರಿತು ಅಸಂಸದೀಯ ಟೀಕೆಗಳನ್ನು ಮಾಡಿದ್ದರು, ಅದರ ಮೇಲೆ ಪ್ರತಿಪಕ್ಷಗಳು ನೋಟಿಸ್ ನೀಡಿದ್ದವು. ಪ್ರತಿಪಕ್ಷಗಳು ಇಂದು ಆ ವಿಷಯವನ್ನು ಪ್ರಸ್ತಾಪಿಸಿದ್ದವು. ಈ ಸಂದರ್ಭದಲ್ಲಿ ಸಭಾಪತಿ ಧಂಕರ್ ಅವರು ಜಯಾ ಬಚ್ಚನ್ ಬಗ್ಗೆ ಪ್ರತಿಕ್ರಿಯಿಸಿದರು.
ನಿಮ್ಮ ಸ್ವರ ಸರಿ ಇಲ್ಲ ಎಂದ ಜಯಾ
ಸ್ಪೀಕರ್ ಧಂಕರ್ ಅವರ ಸ್ವರವನ್ನು ನಾನು ಆಕ್ಷೇಪಿಸಿದ ಜಯಾ ಬಚ್ಚನ್, ''ಸಭಾಪತಿ ಬಳಸಿದ ಪದಗಳು ಮತ್ತು ಧಾಟಿ ಸರಿ ಇರಲಿಲ್ಲ. ನಾವೇನು ಶಾಲಾ ಮಕ್ಕಳಲ್ಲ. ನಮ್ಮಲ್ಲಿ ಕೆಲವರು ಹಿರಿಯ ನಾಗರಿಕರಿದ್ದಾರೆ. ನಾನು ಮಾತಿನ ಧಾಟಿಯಿಂದ ಅಸಮಾಧಾನಗೊಂಡಿದ್ದೇನೆ. ನಾನೂ ಕೂಡ ಓರ್ವ ಕಲಾವಿದೆ. ನಿಮ್ಮ ಹಾವ-ಭಾವ ಮತ್ತು ನಿಮ್ಮ ವ್ಯಂಗ್ಯ ನನಗೆ ಅರ್ಥವಾಗುತ್ತದೆ.
ವಿಶೇಷವಾಗಿ ವಿರೋಧ ಪಕ್ಷದ ನಾಯಕರು ಮಾತನಾಡಲು ನಿಂತಾಗ ಅವರು ಮೈಕ್ ಅನ್ನು ಸ್ವಿಚ್ ಆಫ್ ಮಾಡಿದರು. ನೀವು ಇದನ್ನು ಹೇಗೆ ಮಾಡುತ್ತೀರಿ? ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ನೀವು ಅವಕಾಶ ನೀಡಬೇಕು ... ಅಂದರೆ ನಾನು ನಿಮ್ಮೆಲ್ಲರ ಮುಂದೆ ಹೇಳಲು ಇಷ್ಟಪಡದ ಪ್ರತಿ ಬಾರಿ ಅಸಂಸದೀಯ ಪದಗಳನ್ನು ಬಳಸಲಾಗುತ್ತದೆ. ಅವರು ಉಪದ್ರವ, 'ಬುದ್ಧಿಹೀನ್' ಎಂಬ ಪದಗಳನ್ನು ಬಳಸುತ್ತಾರೆ'' ಜಯಾ ಬಚ್ಚನ್ ಹೇಳಿದರು.
ಸಭ್ಯವಾಗಿ ವರ್ತಿಸಿ, ನೀವು ಸೆಲೆಬ್ರಿಟಿಯಾಗಿರಬಹುದು.. ಆದರೆ ಇಲ್ಲಿ ಶಿಷ್ಟಾಚಾರ ಮುಖ್ಯ: ಸ್ಪೀಕರ್ ತಿರುಗೇಟು
ಇದಕ್ಕೆ ತಿರುಗೇಟು ಕೊಟ್ಟ ಸ್ಪೀಕರ್ ಧಂಕರ್ ಅವರು, ''ನೀವು ಸೆಲೆಬ್ರಿಟಿಯಾಗಿರಬಹುದು..ನನಗದು ಬೇಕಿಲ್ಲ. ಇಲ್ಲಿ ಕೆಲವೊಂದು ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ. ಸಭ್ಯವಾಗಿ ವರ್ತಿಸುವಂತೆ ಸಲಹೆ ನೀಡಿದರು.
ಅಂತೆಯೇ ಜಯಾರನ್ನು ಕುಳಿತುಕೊಳ್ಳಲು ಸೂಚಿಸಿದ ಸ್ಪೀಕರ್ ಧನಕರ್ ನೀವು ನನಗೆ ಪಾಠ ಮಾಡಲು ಬರಬೇಡಿ ಎಂದರು. ಈ ವೇಳೆ ಜಯಾ ಬಚ್ಚನ್ ಕೂಡಾ ವಾಗ್ವಾದ ನಡೆಸಿದ್ದು ಇದು ತುಂಬಾ ಅವಮಾನಕರ ಅನುಭವ. ಈ ವಿಚಾರದಲ್ಲಿ ಸ್ಪೀಕರ್ ಕ್ಷಮೆ ಯಾಚಿಸಬೇಕು ಎಂದು ಜಯಾ ಪಟ್ಟು ಹಿಡಿದರು.
ಜಯಾ ಬಚ್ಚನ್ ಅವರ ಹೇಳಿಕೆಗಳು ಮತ್ತು ಪ್ರತಿಪಕ್ಷಗಳ ಬೇಡಿಕೆಗಳ ಬಗ್ಗೆ ಸಭಾಪತಿ ಜಗದೀಪ್ ಧಂಖರ್ ಅಸಮಾಧಾನ ವ್ಯಕ್ತಪಡಿಸಿದಾಗ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರು ತೀವ್ರ ಪ್ರತಿಭಟನೆ ನಡೆಸಿದರು. ನೀವು ಇಡೀ ದೇಶವನ್ನು ಅಸ್ಥಿರಗೊಳಿಸಲು ಬಯಸುತ್ತೀರಿ ಎಂದು ಧಂಕರ್ ಸದನದಲ್ಲಿ ಪ್ರತಿಭಟನಾ ನಿರತ ಪ್ರತಿಪಕ್ಷ ನಾಯಕರಿಗೆ ಹೇಳಿದರು.
ಪ್ರತಿಪಕ್ಷಗಳ ಸಭಾತ್ಯಾಗ
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಸದನವನ್ನು ಅಶಾಂತಿಯ ಕೇಂದ್ರವಾಗಿಸುವಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಹೇಳಿದರು. "ಸಂವಿಧಾನದ ವೆಚ್ಚದಲ್ಲಿ ನಿಮ್ಮ ದಾರಿಯನ್ನು ಪಡೆಯಲು ನೀವು ನಿರ್ಧರಿಸಿದ್ದೀರಿ" ಎಂದು ಧಂಖರ್ ಹೇಳಿದರು. ಈ ವೇಳೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿ ಸದನದಿಂದ ಹೊರನಡೆದವು.
ಸಭಾಪತಿ ಜಗದೀಪ್ ಧನಖರ್ ಇದನ್ನು "ದುಃಖದ ದಿನ" ಎಂದು ಕರೆದರು. ''ಜಗತ್ತು ನಮ್ಮನ್ನು ನೋಡುತ್ತಿದೆ. ನಾವು "ಅಭಿವೃದ್ಧಿ ಹೊಂದಿದ ಭಾರತ" ದತ್ತ ಸಾಗುತ್ತಿದ್ದೇವೆ. ಆದರೆ "ಈ ಜನರು ಅಡೆತಡೆಗಳನ್ನು ಸೃಷ್ಟಿಸಲು ಬಯಸುತ್ತಿದ್ದಾರೆ" ಎಂದು ಧಂಖರ್ ಅವರು ಸದನದಲ್ಲಿ ಹಾಜರಿದ್ದ ಆಡಳಿತ ಪಕ್ಷಕ್ಕೆ ಹೇಳಿದರು. "ಭಾರತವು ತನ್ನ ಮೂರನೇ ಅವಧಿಯಲ್ಲಿ ಮುನ್ನಡೆಯನ್ನು ಮುಂದುವರೆಸಿದೆ. ಆರು ದಶಕಗಳ ನಂತರ ಇತಿಹಾಸವನ್ನು ನಿರ್ಮಿಸಲಾಗುತ್ತಿದೆ. ಭಾರತವು ಜಾಗತಿಕ ಮನ್ನಣೆಯನ್ನು ಹೊಂದಿರುವ ಪ್ರಧಾನ ಮಂತ್ರಿಯ ರೂಪದಲ್ಲಿ ನಾಯಕತ್ವವನ್ನು ಹೊಂದಿದೆ. ದೇಶವು ಅದರ ಬಗ್ಗೆ ಹೆಮ್ಮೆಪಡುತ್ತದೆ ಎಂದರು.
ಮೇಲ್ಮನೆಯಲ್ಲಿ 'ಜಯಾ ಅಮಿತಾಬ್ ಬಚ್ಚನ್' ಗದ್ದಲ ಮರುಕಳಿಸುತ್ತಿರುವುದನ್ನು ಪ್ರತಿಭಟಿಸಿದ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಜಯಾ ಬಚ್ಚನ್ ಅವರನ್ನು ಬೆಂಬಲಿಸಿ ಇಂದು ಮತ್ತೆ ರಾಜ್ಯಸಭೆಯಿಂದ ಹೊರನಡೆದವು.
Advertisement