
ನವದೆಹಲಿ: ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸದಿದ್ದಲ್ಲಿ ಪಂಜಾಬ್‌ನಲ್ಲಿ 14,288 ಕೋಟಿ ರೂಪಾಯಿ ವೆಚ್ಚದ ಒಟ್ಟು 293 ಕಿ.ಮೀ ಉದ್ದದ ಎಂಟು ತೀವ್ರ ಬಾಧಿತ ಹೆದ್ದಾರಿ ಯೋಜನೆಗಳನ್ನು ರದ್ದುಗೊಳಿಸಲಾಗುವುದು ಅಥವಾ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪಂಜಾಬ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಗಡ್ಕರಿ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದಿದ್ದು, ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ವೇ ಯೋಜನೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಘಟನೆಗಳ ಉಲ್ಲೇಖಿಸಿದ್ದಾರೆ.
"ಜಲಂಧರ್ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಗುತ್ತಿಗೆದಾರರ ಇಂಜಿನಿಯರ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದರೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ" ಎಂದು ಗಡ್ಕರಿ ಅವರು ಆಗಸ್ಟ್ 9ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ವೇಯ ಗುತ್ತಿಗೆದಾರರ ಯೋಜನಾ ಶಿಬಿರದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ ಮತ್ತು ಯೋಜನಾ ಶಿಬಿರವನ್ನು ಮತ್ತು ಅವರ ಸಿಬ್ಬಂದಿಯನ್ನು ಜೀವಂತವಾಗಿ ಸುಡುವುದಾಗಿ ಎಂಜಿನಿಯರ್‌ಗಳಿಗೆ ಬೆದರಿಕೆ ಹಾಕಿದ ಲೂಧಿಯಾನ ಜಿಲ್ಲೆಯ ಮತ್ತೊಂದು ಘಟನೆಯನ್ನು ಕೇಂದ್ರ ಸಚಿವರು ಉಲ್ಲೇಖಿಸಿದ್ದಾರೆ.
ಆದರೆ, ಈ ಸಂಬಂಧ ಎನ್‌ಎಚ್‌ಎಐ ಅಧಿಕಾರಿಗಳು ಲಿಖಿತ ಮನವಿ ಮಾಡಿದರೂ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಮತ್ತು ದುಷ್ಕರ್ಮಿಗಳನ್ನು ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ.
"ಪರಿಸ್ಥಿತಿ ಸುಧಾರಿಸದಿದ್ದರೆ, 14,288 ಕೋಟಿ ರೂಪಾಯಿ ವೆಚ್ಚದ ಒಟ್ಟು 293 ಕಿಮೀ ಉದ್ದದ ತೀವ್ರ ಪೀಡಿತ 8 ಯೋಜನೆಗಳನ್ನು ರದ್ದುಗೊಳಿಸುವುದು/ಸ್ಥಗಿತಗೊಳಿಸುವುದನ್ನು ಬಿಟ್ಟು NHAI ಗೆ ಬೇರೆ ದಾರಿ ಇಲ್ಲ. ಇದರಿಂದ ಇಡೀ ಕಾರಿಡಾರ್ ನಿಷ್ಪ್ರಯೋಜಕವಾಗಲಿದೆ" ಎಂದು ಗಡ್ಕರಿ ಅವರು ಎಚ್ಚರಿಕೆ ನೀಡಿದ್ದಾರೆ.
Advertisement