ಅನಂತ್ ನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಇಬ್ಬರು ನಾಗರಿಕರಲ್ಲಿ ಒಬ್ಬರು ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅನಂತನಾಗ್‌ನ ಪ್ರಸಿದ್ಧ ಪ್ರವಾಸಿ ತಾಣ ಕೊಕೆರ್‌ನಾಗ್‌ನ ಅಹ್ಲಾನ್ ಗಾಂಡೋಲ್ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರೂ ಹುತಾತ್ಮರಾಗಿದ್ದರು. ಮೂವರು ಯೋಧರು ಮತ್ತು ಇಬ್ಬರು ನಾಗರಿಕರು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಭಾನುವಾರವೂ ಈ ಪ್ರದೇಶದಲ್ಲಿ ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನೆ ತಿಳಿಸಿದೆ.
ಶನಿವಾರ ಸಂಜೆ ಕೋಕರ್ನಾಗ್ ನಲ್ಲಿ "ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ ಪ್ರತಿದಾಳಿ ನಡೆಸಲಾಯಿತು. ಘಟನೆಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾಗಿ ಸೇನೆ ಮಾಹಿತಿ ನೀಡಿದೆ.
ಈ ಪ್ರದೇಶವು 10,000 ಅಡಿಗಳಷ್ಟು ಎತ್ತರದಲ್ಲಿದ್ದು, ದಟ್ಟವಾದ ಗಿಡಗಂಟಿಗಳು, ದೊಡ್ಡ ಬಂಡೆಗಳನ್ನು ಹೊಂದಿದ್ದು, ಕಾರ್ಯಾಚರಣೆಗೆ ಗಂಭೀರ ಸವಾಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು,ಉಗ್ರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಸೇನೆ ಹೇಳಿದೆ.
Advertisement