ಭೋಪಾಲ್: ಮಧ್ಯಪ್ರದೇಶ ಹುಲಿ ಸಂರಕ್ಷಿತಾರಣ್ಯದಿಂದ ಹುಲಿಗಳ ಸ್ಥಳಾಂತರಕ್ಕೆ ಕೊನೆಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ- NTCA (National Tiger Conservative Authority) ಒಪ್ಪಿಗೆ ನೀಡಿದ್ದು, ವಿವಿಧ ರಾಜ್ಯಗಳಲ್ಲಿ ಸಂತತಿ ಹರಡಲು ನೆರವಾಗಲಿದೆ ಎಂದು ಹೇಳಲಾಗಿದೆ.
ಹೌದು.. ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಮಧ್ಯಪ್ರದೇಶದಿಂದ ಕೆಲ ಹುಲಿಗಳನ್ನು ನೆರೆಯ ಮೂರು ರಾಜ್ಯಗಳಿಗೆ ಅಂದರೆ ಒಡಿಶಾ, ಛತ್ತೀಸಗಡ ಮತ್ತು ರಾಜಸ್ಥಾನಕ್ಕೆ ಸ್ಥಳಾಂತರಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆ ತಿಳಿಸಿದೆ.
ಸೂಚಿತ ಮೂರೂ ರಾಜ್ಯಗಳಲ್ಲಿಯೂ ಹುಲಿಗಳ ಸಂತತಿ ಹರಡಲು ಈ ಯೋಜನೆ ಸಹಾಯವಾಗಲಿದೆ. ಇದಕ್ಕೆ ಹುಲಿಗಳನ್ನು ಸ್ಥಳಾಂತರಿಸಲು NTCA ತಾಂತ್ರಿಕ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಪ್ರದೇಶ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬರಾಜನ್ ಸೇನ್ ತಿಳಿಸಿದ್ದಾರೆ.
ಅಂತೆಯೇ ಮೂರೂ ರಾಜ್ಯಗಳಿಗೂ ತಲಾ ಮೂರು ಗಂಡು ಹುಲಿ ಹಾಗೂ ತಲಾ ಒಂದು ಹೆಣ್ಣು ಹುಲಿಯನ್ನು ಕಳುಹಿಸಿಕೊಡಲಾಗುವುದು. ಆಯ್ಕೆ ಮಾಡಿದ ಸಂರಕ್ಷಿತಾರಣ್ಯದಲ್ಲಿ ಹುಲಿಗಳಿಗೆ ಅತಿಹೆಚ್ಚಿನ ಕಾಳಜಿಯನ್ನು ಆಯಾ ರಾಜ್ಯಗಳು ತೆಗೆದುಕೊಳ್ಳುವ ಭರವಸೆ ಇದೆ. ರಾಜ್ಯ ಸರ್ಕಾರದ ಅನುಮೋದನೆಯ ನಂತರ ಸ್ಥಳಾಂತರ ಕಾರ್ಯವು ಪ್ರಾರಂಭವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಇದು ಭಾರತದಲ್ಲೇ ಅತಿ ಹೆಚ್ಚು ಎನ್ನಲಾಗಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು ರಾಜ್ಯದಲ್ಲಿ 400ಕ್ಕೂ ಹೆಚ್ಚು ಹುಲಿಗಳಿವೆ.
ಅಂತಾರಾಷ್ಟ್ರೀಯ ಹುಲಿ ದಿನವನ್ನು ಗುರುತಿಸುವ ಕಾರ್ಯಕ್ರಮವೊಂದರಲ್ಲಿ, ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೀಸಲು ಪ್ರದೇಶದಲ್ಲಿರುವ ಕೆಲವು ಹುಲಿಗಳನ್ನು ರಾಜ್ಯದ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ಕೆಲವು ಇತರ ರಾಜ್ಯಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದರು.
Advertisement