
ಗುನಾ: ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಕೂದಲೆಳೆ ಅಂತರದಲ್ಲಿ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮಧ್ಯ ಪ್ರದೇಶದ ಗುನಾದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಖಾಸಗಿ ವಿಮಾನಯಾನ ಅಕಾಡೆಮಿಯ ತರಬೇತಿ ವಿಮಾನವು ಏರ್‌ಸ್ಟ್ರಿಪ್‌ನಲ್ಲೇ ಪತನಗೊಂಡಿದೆ.
ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಖಾಸಗಿ ವಿಮಾನಯಾನ ಅಕಾಡೆಮಿಯ ಎರಡು ಆಸನಗಳ ಸೆಸ್ನಾ 152 ವಿಮಾನವು ಮಧ್ಯಾಹ್ನ 1.30 ರ ಸುಮಾರಿಗೆ ಪತನಗೊಂಡಿದೆ ಎಂದು ಗುನಾ ಕ್ಯಾಂಟ್ ಪೊಲೀಸ್ ಠಾಣೆಯ ಉಸ್ತುವಾರಿ ದಿಲೀಪ್ ರಜೋರಿಯಾ ತಿಳಿಸಿದ್ದಾರೆ. ಇಂಜಿನ್ ವೈಫಲ್ಯದಿಂದ ವಿಮಾನ ಪತನಗೊಂಡಿರುವ ಶಂಕೆ ವ್ಯಕ್ತವಾಗಿದ್ದು. ಅಪಘಾತಕ್ಕೂ ಮುನ್ನ ಅವರು ಸುಮಾರು 40 ನಿಮಿಷಗಳ ಕಾಲ ಹಾರಾಟ ನಡೆಸಿದ್ದರು ಎಂದು ಅವರು ತಿಳಿಸಿದ್ದಾರೆ.
ಪತನದ ಬಳಿಕ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಇಬ್ಬರೂ ಪೈಲಟ್‌ಗಳನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಮಾನವನ್ನು ತಪಾಸಣೆ ಮತ್ತು ನಿರ್ವಹಣೆಗಾಗಿ ಕೆಲವು ದಿನಗಳ ಹಿಂದೆ ಇಲ್ಲಿಗೆ ತರಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement