
ಹೈದರಾಬಾದ್: ನವಿಲು ಮಾಂಸದ ಕರಿ ತಯಾರಿಸುವ ಬಗ್ಗೆ ವಿಡಿಯೋ ಮಾಡಿ ಅದನ್ನು ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಯೂಟ್ಯೂಬರ್ ನನ್ನು ಸೋಮವಾರ ಬಂಧಿಸಲಾಗಿದೆ.
"ನವಿಲು ಕರಿ ರೆಸಿಪಿ" ವಿಡಿಯೋವನ್ನು ತನ್ನ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಾಗಿದೆ. ಯೂಟ್ಯೂಬರ್, ತನ್ನ ಚಾನೆಲ್‌ಗೆ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಅರಣ್ಯ ಅಧಿಕಾರಿಯೊಬ್ಬರು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ತಿಳಿಸಿದ್ದಾರೆ.
ನವಿಲು ಕರಿ ತಯಾರಿಸುವುದು ಹೇಗೆ ಎಂದು ವ್ಯಕ್ತಿಯೊಬ್ಬ ತನ್ನ ಚಾನೆಲ್‌ನಲ್ಲಿ ವಿಡಿಯೋ ಹಾಕಿದ್ದಾರೆ ಎಂಬ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ತಂಗಲ್ಲಪಲ್ಲಿ ಗ್ರಾಮಕ್ಕೆ ಆಗಮಿಸಿ ಆ ವ್ಯಕ್ತಿಯ ಮನೆಯಿಂದ ನವಿಲು ಕರಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕರಿ ಮಾದರಿಯನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
'ನವಿಲು ಕರಿ' ರೆಸಿಪಿ ವಿಡಿಯೋ ವೈರಲ್ ಆದ ನಂತರ ಭಾನುವಾರ ಯೂಟ್ಯೂಬರ್ ಕೋದಂ ಪ್ರಣಯ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರಾಣಿ ಹಕ್ಕುಗಳ ಹೋರಾಟಗಾರರು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡಿದ್ದು, ಯೂಟ್ಯೂಬರ್ ನನ್ನು ವಶಕ್ಕೆ ಪಡೆಯಲಾಗಿದೆ.
ರಾಷ್ಟ್ರೀಯ ಪಕ್ಷಿ ನವಿಲಿನ ಪದಾರ್ಥ ಮಾಡಿ ತಿಂದ ಪ್ರಣಯ್ ಅವರ ವಿಡಿಯೋಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಡಿಯೋವನ್ನು ಯೂಟ್ಯೂಬ್ ನಿಂದ ಅಳಿಸಲಾಗಿದೆ.
Advertisement