ಕೋಲ್ಕತ್ತಾ: ಭಾನುವಾರದೊಳಗೆ ಪೊಲೀಸರು ಪ್ರಕರಣವನ್ನು ಭೇದಿಸಲು ವಿಫಲವಾದರೆ ಆರ್‌ಜಿ ಕಾರ್ ಆಸ್ಪತ್ರೆಯ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹತ್ಯೆಯಾದ ವೈದ್ಯೆಯ ನಿವಾಸಕ್ಕೆ ಇಂದು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ಭಾನುವಾರದೊಳಗೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಾಧ್ಯವಾಗದಿದ್ದರೆ, ನಾವು ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುತ್ತೇವೆ. ಆದರೆ, ಕೇಂದ್ರ ತನಿಖಾ ಸಂಸ್ಥೆಯ ಯಶಸ್ಸಿನ ಪ್ರಮಾಣವು ತುಂಬಾ ಕಡಿಮೆಯಾಗಿದೆ" ಎಂದರು.
ಕಳೆದ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ 31 ವರ್ಷದ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಲಾಗಿದೆ.
ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆಗೂ ಮುನ್ನ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ.
ಅಪರಾಧದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಆ ವ್ಯಕ್ತಿ ಹೊರಗಿನ ವ್ಯಕ್ತಿಯಾಗಿದ್ದು, ಅವರು ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಉಚಿತ ಪ್ರವೇಶ ಹೊಂದಿದ್ದರು. "ಅವರ ಚಟುವಟಿಕೆಗಳು ಸಾಕಷ್ಟು ಅನುಮಾನಾಸ್ಪದವಾಗಿದೆ ಮತ್ತು ಅವರು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ತೋರುತ್ತದೆ" ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
Advertisement