
ಜೈಸಲ್ಮೇರ್: ಸಾಗಣೆಗೆ ಸುಲಭವಾದ (ಪೋರ್ಟಬಲ್) ಟ್ಯಾಂಕ್ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯನ್ನು ಡಿಆರ್ ಡಿಒ, ಸೇನೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಭಾರತದಲ್ಲೇ ತಯಾರಿಸಲಾದ 'ಮ್ಯಾನ್-ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಅಥವಾ MPATGM ವ್ಯವಸ್ಥೆಯನ್ನು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಇತ್ತೀಚೆಗೆ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದ್ದು, ನಿರೀಕ್ಷಿತ ಫಲಿತಾಂಶ ಪ್ರಕಟವಾಗಿದೆ ಎಂದು ಡಿಆರ್ ಡಿಒ ಹೇಳಿದೆ.
ಮ್ಯಾನ್-ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಸಿಸ್ಟಮ್ ಕ್ಷಿಪಣಿ, ಲಾಂಚರ್, ಟಾರ್ಗೆಟ್ ಅಕ್ವಿಸಿಷನ್ ಸಿಸ್ಟಮ್ ಮತ್ತು ಅಗ್ನಿ ನಿಯಂತ್ರಣ ಘಟಕವನ್ನು ಒಳಗೊಂಡಿದೆ. ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಸಿಡಿತಲೆ ಹಾರಾಟದ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಮತ್ತು ಕ್ಷಿಪಣಿ ಕಾರ್ಯಕ್ಷಮತೆ ಮತ್ತು ಸಿಡಿತಲೆ ಕಾರ್ಯಕ್ಷಮತೆ "ಗಮನಾರ್ಹ"ವಾಗಿರುವುದು ಕಂಡುಬಂದಿದೆ ಎಂದು DRDO ಅಧಿಕಾರಿಗಳು ತಿಳಿಸಿದ್ದಾರೆ.
ಎಟಿಜಿಎಂ ವ್ಯವಸ್ಥೆಯು ಹಗಲು- ರಾತ್ರಿ ಎರಡರಲ್ಲೂ ಸುಸಜ್ಜಿತವಾಗಿದ್ದು, ಉನ್ನತ ದಾಳಿಯ ಸಾಮರ್ಥ್ಯವನ್ನು ಹೊಂದಿದೆ. ಡ್ಯುಯಲ್ ಮೋಡ್ ಸೀಕರ್ ಕಾರ್ಯವು ಟ್ಯಾಂಕ್ ಯುದ್ಧಕ್ಕಾಗಿ ಕ್ಷಿಪಣಿ ಸಾಮರ್ಥ್ಯಕ್ಕೆ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವ್ಯವಸ್ಥೆಯ ಯಶಸ್ವಿ ಪ್ರಯೋಗಗಳಿಗಾಗಿ DRDO ಮತ್ತು ಭಾರತೀಯ ಸೇನೆಯನ್ನು ಅಭಿನಂದಿಸಿದ್ದಾರೆ, "ಸುಧಾರಿತ ತಂತ್ರಜ್ಞಾನ ಆಧಾರಿತ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಇದು ಒಂದು ಪ್ರಮುಖ ಹೆಜ್ಜೆ" ಎಂದು ಬಣ್ಣಿಸಿದ್ದಾರೆ.
Advertisement