ಕೋಲ್ಕತ್ತಾ: ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಗುರುವಾರ ಐವರು ವೈದ್ಯರಿಗೆ ಸಮನ್ಸ್ ನೀಡಿದೆ.
ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಐವರು ವೈದ್ಯರಿಗೆ ಸಿಬಿಐ ಸಮನ್ಸ್ ನೀಡಿದೆ.
ಏತನ್ಮಧ್ಯೆ, ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ಕಟ್ಟಡದ ನೆಲ ಮಹಡಿಯಲ್ಲಿ ರಾತ್ರಿ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ.
ಗುರುವಾರ ಮಧ್ಯರಾತ್ರಿಯ ನಂತರ 40-50 ಅಪರಿಚಿತ ದುಷ್ಕರ್ಮಿಗಳ ಗುಂಪು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪ್ರವೇಶಿಸಿ, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಧ್ವಂಸಗೊಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ “ ವುಮೆನ್ ರಿಕ್ಲೈಮ್ ದಿ ನೈಟ್” ಪ್ರತಿಭಟನಾ ಚಳವಳಿಯ ನಡುವೆ ಈ ಘಟನೆ ಸಂಭವಿಸಿದೆ.
ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯ ಅತ್ಯಾಚಾರ ಮತ್ತು ಹತ್ಯೆಯ ನಂತರ ಆಸ್ಪತ್ರೆಯಲ್ಲಿ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರ ಹೊರತಾಗಿಯೂ ವಿಧ್ವಂಸಕ ಕೃತ್ಯಗಳು ಹೇಗೆ ನಡೆದವು ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಪೊಲೀಸ್ ಸಿಬ್ಬಂದಿ ವೈದ್ಯಕೀಯ ಕಾಲೇಜ್ ಆವರಣದಲ್ಲಿದ್ದರೂ ವಿಧ್ವಂಸಕ ಕೃತ್ಯ ನಡೆದಿದೆ ಎಂದು ಪ್ರತಿಭಟನಾನಿರತ ವೈದ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ಗೂಂಡಾಗಳು ಕ್ಯಾಂಪಸ್‌ಗೆ ನುಗ್ಗಿ ಧರಣಿ ನಿರತ ವೈದ್ಯರಿಗೆ ಥಳಿಸಿದ್ದಾರೆ. ಇದು ನಮ್ಮ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವಾಗಿದೆ. ಇದರಿಂದ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ ಎಂದು ಭಾವಿಸಿದ್ದಾರೆ. ಆದರೆ ಇಂತಹ ಘಟನೆಗಳು ಕೊನೆಯವರೆಗೂ ಹೋರಾಡುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ" ಎಂದು ಅವರು ಹೇಳಿದ್ದಾರೆ.
Advertisement