ಕೋಲ್ಕತ್ತಾ: ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ಕಟ್ಟಡದ ನೆಲ ಮಹಡಿಯಲ್ಲಿ ಬುಧವಾರ ರಾತ್ರಿ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯದ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ಪೀಠ, "ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ". ಏಕಾಏಕಿ 7 ಸಾವಿರ ಜನರು ಹೇಗೆ ಜಮಾಯಿಸಿದರು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಇಂತಹ ಭಯಾನಕ ಪರಿಸ್ಥಿತಿ ಇದ್ದರೆ ಆಸ್ಪತ್ರೆಯನ್ನು ಮುಚ್ಚಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿ ಎಂದು ಸಿಡಿಮಿಡಿಗೊಂಡ ನ್ಯಾಯಾಲಯ, ಆಸ್ಪತ್ರೆಯೇ ಮುಚ್ಚಿದಾಗ ಇಂತಹ ಕೃತ್ಯಗಳು ನಡೆಯುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿತು. ಅಲ್ಲದೇ, ಇಂತಹ ಭಯದ ವಾತಾವರಣದಲ್ಲಿ ವೈದ್ಯರು ಹೇಗೆ ಕೆಲಸ ಮಾಡುತ್ತಾರೆ? ಎಂದು ಪ್ರಶ್ನಿಸಿದೆ.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಪರಾಧ ನಡೆದ ಸ್ಥಳದ ಬಳಿ ನವೀಕರಣ ಕಾಮಗಾರಿಯ ತುರ್ತು ಅಗತ್ಯ ಮತ್ತು ಸಮಯದ ಬಗ್ಗೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೆ ಅಪರಾಧ ನಡೆದ ಸ್ಥಳವು ಹಾಗೇ ಇದೆ ಎಂಬುದನ್ನು ತೋರಿಸಲು ಛಾಯಾಚಿತ್ರಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶಿಸಿದೆ.
ಆಗಸ್ಟ್ 21 ರಂದು ಮುಂದಿನ ವಿಚಾರಣೆಯ ದಿನಾಂಕದಂದು ನೈಜ ಸ್ಥಿತಿ ಮತ್ತು ಸಂಬಂಧಿತ ವಿಷಯಗಳನ್ನು ವಿವರಿಸುವ ಎರಡು ಪ್ರತ್ಯೇಕ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗೆ ಸೂಚಿಸಿದೆ.
ಆಸ್ಪತ್ರೆಯಲ್ಲಿ ನಡೆದ ವಿಧ್ವಂಸ ಕೃತ್ಯ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 19 ಜನರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಶುಕ್ರವಾರ ಹೇಳಿದ್ದಾರೆ.
Advertisement