ಕೋಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದು, ರಕ್ಷಣೆ ಕೋರಿ ಕಲ್ಕತ್ತಾ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪೊಲೀಸ್ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇನ್ನೇನಾದರೂ ಅಥವಾ ಇತರ ಯಾವುದೇ ಹಕ್ಕುಗಳನ್ನು ನಮೂದಿಸಬೇಕಾದರೆ ಪ್ರತ್ಯೇಕ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಪ್ರಾಂಶುಪಾಲರ ಪರ ವಕೀಲರಿಗೆ ಹೇಳಿದೆ.
ನ್ಯಾಯಾಲಯದಲ್ಲಿ ವಾದ ಮಂಡಿಸಿದ ಮಾಜಿ ಪ್ರಾಂಶುಪಾಲರ ಪರ ವಕೀಲರು, ನಮ್ಮ ಕಕ್ಷಿದಾರರು ಸಿಬಿಐ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ. ಆದರೆ ಅವರ ಮನೆಯ ಹೊರಗೆ ನಿರಂತರ ಪ್ರತಿಭಟನೆ ನಡೆಯುತ್ತಿದೆ, ಅವರಿಗೆ ಭದ್ರತೆ ಸಿಕ್ಕರೆ ಇಂದೇ ಸಿಬಿಐ ಮುಂದೆ ಹಾಜರಾಗಬಹುದು ಎಂದು ಹೇಳಿದರು.
ಈ ಪ್ರಕರಣದಲ್ಲಿ ಆರ್‌ಜಿ ಕಾರ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಸಿಬಿಐ ವಿಚಾರಣೆಗೆ ಕರೆದಿದೆ.
ಆಗಸ್ಟ್ 9 ರಂದು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ಮಹಿಳೆಯರ ಮಧ್ಯರಾತ್ರಿ ಪ್ರತಿಭಟನೆಯ ನಡುವೆ ಗುರುವಾರ ದುಷ್ಕರ್ಮಿಗಳು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಶುಶ್ರೂಷಾ ಕೇಂದ್ರ, ಔಷಧಿ ಅಂಗಡಿ ಮತ್ತು ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ನುಗ್ಗಿ ಧ್ವಂಸಗೊಳಿಸಿದ್ದಾರೆ. ಈ ಹಿಂಸಾಚಾರದಲ್ಲಿ ಕೆಲವು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು 19 ಮಂದಿಯನ್ನು ಬಂಧಿಸಿದ್ದಾರೆ.
Advertisement