
ಕೊಚ್ಚಿ: ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. 64 ವರ್ಷದ ಮೋಹನ್ ಲಾಲ್ ತೀವ್ರ ಜ್ವರ, ಉಸಿರಾಟದ ತೊಂದರೆ ಹಾಗೂ ಸ್ನಾಯು ನೋವು ಹೊಂದಿರುವುದಾಗಿ ಕೊಚ್ಚಿಯ ಅಮೃತಾ ಆಸ್ಪತ್ರೆ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಅವರಿಗೆ ವೈರಲ್ ಉಸಿರಾಟದ ಸೋಂಕಿರುವ ಶಂಕೆ ವ್ಯಕ್ತವಾಗಿದೆ. ಐದು ದಿನಗಳ ವಿಶ್ರಾಂತಿಯೊಂದಿಗೆ ಔಷಧಿಗಳನ್ನು ತೆಗೆದುಕೊಳ್ಳುವಂತೆ ಹಾಗೂ ಜನರಿರುವ ಕಡೆ ಸೇರದಂತೆ ಸೂಚಿಸಲಾಗಿದೆ ಎಂದು ಐಎಎನ್ಎಸ್ ವರದಿ ಮಾಡಿದೆ. ಬಿಗ್ ಬಜೆಟ್ ನ ಆಕ್ಷನ್ ಸಿನಿಮಾ L2 ಎಂಪುರಾನ್‌ಗಾಗಿ ಗುಜರಾತ್ ನಲ್ಲಿ ಶೂಟಿಂಗ್ ಪೂರ್ಣಗೊಳಿಸಿದ ನಂತರ ಅವರು ಕೊಚ್ಚಿಗೆ ಮರಳಿದ್ದರು.
ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಮೋಹನ್ ಲಾಲ್ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ 2001 ಮತ್ತು 2019 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಕ್ರಮವಾಗಿ ಪದ್ಮಶ್ರೀ ಮತ್ತು ಪದ್ಮಭೂಷಣ ನೀಡಲಾಗಿತ್ತು. ಅವರು ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿದ್ದಾರೆ.
ಮೋಹನ್‌ಲಾಲ್ ಅವರ ಚೊಚ್ಚಲ ನಿರ್ದೇಶನದ ಬರೋಜ್ ಈ ವರ್ಷ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಇದನ್ನು ಮಾರ್ಚ್ 28, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವಿಳಂಬದ ಕಾರಣ ಬಿಡುಗಡೆಯನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ.
Advertisement