ದೆಹಲಿ: ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮ ಪ್ರಶಸ್ತಿ ಪುರಸ್ಕೃತ 70ಕ್ಕೂ ಹೆಚ್ಚು ವೈದ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಆರೋಗ್ಯ ಸಿಬ್ಬಂದಿಯನ್ನು ಹಿಂಸಾಚಾರದಿಂದ ರಕ್ಷಿಸಲು ಸುಗ್ರೀವಾಜ್ಞೆ ಮೂಲಕ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ ಭಯಾನಕ ಘಟನೆ ಬಗ್ಗೆ ತೀವ್ರ ಕಳವಳ ಮತ್ತು ಆಳವಾದ ವೇದನೆಯಿಂದ ನಿಮಗೆ ಪತ್ರ ಬರೆಯುತ್ತಿದ್ದೇವೆ. ನಮ್ಮ ರಾಷ್ಟ್ರದ ಮುಖ್ಯಸ್ಥರಾಗಿ, ಈ ಆತಂಕಕಾರಿ ಪರಿಸ್ಥಿತಿಯನ್ನು ಪರಿಹರಿಸಲು ನಿಮ್ಮ ತಕ್ಷಣದ ಮಧ್ಯಸ್ಥಿಕೆಯನ್ನು ನಾವು ಬೇಡಿಕೊಳ್ಳುತ್ತೇವೆ. ಇಂತಹ ಕ್ರೂರ ಕೃತ್ಯಗಳು ವೈದ್ಯಕೀಯ ವೃತ್ತಿಪರರ ಸೇವೆಯ ತಳಹದಿಯನ್ನು ಅಲುಗಾಡಿಸುತ್ತವೆ. ಸಂತ್ರಸ್ತರ ಕುಟುಂಬದೊಂದಿಗೆ ನಾವು ನಿಲ್ಲುತ್ತೇವೆ, ಅವರ ನೋವು ಮತ್ತು ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ತಮ್ಮ ಕೆಲಸದ ಸಂದರ್ಭದಲ್ಲಿ ಇಂತಹ ಹಿಂಸೆಯನ್ನು ಹೆಚ್ಚಾಗಿ ಎದುರಿಸುತ್ತಿರುವ ವೈದ್ಯಕೀಯ ಸಮುದಾಯಕ್ಕೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಘನತೆಯನ್ನು ಅತ್ಯಂತ ಆದ್ಯತೆಯೊಂದಿಗೆ ರಕ್ಷಿಸಬೇಕು ಎಂದಿದ್ದಾರೆ.
ಇಂತಹ ದುಷ್ಕೃತ್ಯಗಳನ್ನು ತಡೆಯಲು ಬಲವಾದ ಕ್ರಮಗಳು ತೀರಾ ಅಗತ್ಯವಿದೆ. ಹೀಗಾಗಿ ಕಾನೂನು ಜಾರಿ ಸಂಸ್ಥೆಗಳು, ನೀತಿ ನಿರೂಪಕರು ಮತ್ತು ಸಮಾಜವು ತಕ್ಷಣವೇ ಈ ಕುರಿತು ಕ್ರಮವನ್ನು ತೆಗೆದುಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ ಎಂದಿದ್ದಾರೆ.
Advertisement