
ಮುಂಬೈ: ಮಹಾರಾಷ್ಟ್ರದ ಬದ್ಲಾಪುರದಲ್ಲಿ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಶಾಲಾ ಅಟೆಂಡರ್ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಖಂಡಿಸಿ ಭಾರಿ ಪ್ರತಿಭಟನೆ ನಡೆಯುತ್ತಿರುವುದರ ಮಧ್ಯ ಮಹಾ ವಿಕಾಸ್ ಅಘಾಡಿ(ಎಂವಿಎ) ಆಗಸ್ಟ್ 24 ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಬುಧವಾರ ಕರೆದಿದ್ದ ಸಭೆಯಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಮುಷ್ಕರಕ್ಕೆ ಕರೆ ನೀಡಲು ಎಂವಿಎ ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್, "ನಾವು ಸೀಟು ಹಂಚಿಕೆ ಬಗ್ಗೆ ಚರ್ಚಿಸಲು ಇಲ್ಲಿಗೆ ಬಂದಿದ್ದೇವೆ. ಆದರೆ ನಾವು ಸೀಟು ಹಂಚಿಕೆ ಬಗ್ಗೆ ಚರ್ಚಿಸಲಿಲ್ಲ. ಬದ್ಲಾಪುರ ಘಟನೆಯ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು, ಈ ಬಗ್ಗೆ ಚರ್ಚಿಸಿದೆವು ಎಂದರು.
ಮಹಾರಾಷ್ಟ್ರದ ಜನರು ಆಕ್ರೋಶಗೊಂಡಿದ್ದಾರೆ ಮತ್ತು ಪ್ರತಿಭಟಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬದ್ಲಾಪುರ ಘಟನೆಗೆ ಸಂಬಂಧಿಸಿದಂತೆ ಎಂವಿಎ ಆಗಸ್ಟ್ 24 ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಲಿದೆ ಎಂದರು.
"ನಿನ್ನೆ, ಬದ್ಲಾಪುರ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ 300 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ... ಇದು ಅಸಂವಿಧಾನಿಕ ಸರ್ಕಾರ... ಅಪರಾಧಿಗಳು ಹೆಚ್ಚಾಗುತ್ತಿದ್ದಾರೆ ಎಂದು ಎನ್‌ಸಿಪಿ-ಎಸ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಅವರು ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ಥೋರಟ್ ಕೂಡ ಮಾತನಾಡಿದ್ದು, ಇಂದು ಸಭೆ ನಡೆಸಿ ಆಗಸ್ಟ್ 24ರಂದು ಬಂದ್‌ಗೆ ಕರೆ ನೀಡಿದ್ದೇವೆ. ಬದ್ಲಾಪುರ ಘಟನೆ ಅತ್ಯಂತ ಗಂಭೀರವಾಗಿದೆ ಎಂದರು.
Advertisement