ಮಹಾರಾಷ್ಟ್ರ: ಮಹಾರಾಷ್ಟ್ರದ ಬದ್ಲಾಪುರದಲ್ಲಿ ಕಿಂಡರ್ ಗಾರ್ಡನ್ ಮಕ್ಕಳ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವುದರಲ್ಲಿ ವಿಳಂಬವಾದರೂ, ಘಟನೆಯನ್ನು ಪ್ರತಿಭಟಿಸಿದವರ ಮೇಲೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗಿದೆ.
ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವರ ಪೈಕಿ 70 ಮಂದಿಯನ್ನು ಬಂಧಿಸಲಾಗಿದ್ದು, 500 ಮಂದಿ ವಿರುದ್ಧ 5 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ. ಪ್ರತಿಭಟನೆ ನಡೆದ 24 ಗಂಟೆಗಳ ಒಳಗಾಗಿ ಪ್ರತಿಭಟನಾಕಾರರ ವಿರುದ್ಧ ಈ ಕ್ರಮ ಜರುಗಿಸಲಾಗಿದೆ.
ಲೈಂಗಿಕ ದೌರ್ಜನ್ಯದ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೆ ಪೊಲೀಸರು 12 ಗಂಟೆಗಳ ಕಾಲ ಸಮಯ ತೆಗೆದುಕೊಂಡಿದ್ದರು. ಆದರೆ ಪ್ರತಿಭಟನಾ ನಿರತರ ವಿರುದ್ಧ ತ್ವರಿತವಾಗಿ ಎಫ್ಐಆರ್ ಹಾಕಿ ಬಂಧಿಸಿರುವ ಪೊಲೀಸರ ಕ್ರಮಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಪೊಲೀಸರ ಅಸೂಕ್ಷ್ಮತೆಯ ವಿಷಯವಾಗಿ ವಿಪಕ್ಷಗಳು ಮಹಾಯುತಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.
ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ) ಒಳಗೊಂಡಿರುವ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ನಾಯಕರು, ಬಾಲಕಿಯರ ಪೋಷಕರು ತಮ್ಮ ದೂರುಗಳನ್ನು ತೆಗೆದುಕೊಳ್ಳುವ ಮೊದಲು ಬದ್ಲಾಪುರ ಪೊಲೀಸ್ ಠಾಣೆಯಲ್ಲಿ 12 ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಬಾಲಕಿಯರ ವೈದ್ಯಕೀಯ ಪರೀಕ್ಷೆಯು 10 ಗಂಟೆಗಳ ಕಾಲ ವಿಳಂಬವಾಗಿದೆ ಎಂದು ವರದಿಯಾಗಿದೆ, ಆಡಳಿತವು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿತ್ತು. ಎರಡು ತಿಂಗಳ ಗರ್ಭಿಣಿಯಾಗಿದ್ದರೂ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರ ತಾಯಿಯನ್ನು 10 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರುವಂತೆ ಮಾಡಿರುವುದು ಆಕ್ರೋಶವನ್ನು ಹೆಚ್ಚಿಸಿದೆ.
ಕರ್ತವ್ಯಲೋಪ ಆರೋಪದ ಮೇಲೆ ಮಹಾರಾಷ್ಟ್ರ ಸರ್ಕಾರ 3 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಮತ್ತು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆಯನ್ನು ಹಸ್ತಾಂತರಿಸಿದೆ. ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು, ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ನನ್ನು ಅಮಾನತುಗೊಳಿಸಿದೆ.
Advertisement