ಲಖನೌ: ಉತ್ತರ ಪ್ರದೇಶದಲ್ಲಿ ಅಂಚೆ ಕಚೇರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಆರೋಪದ ಮೇಲೆ ಸಿಬಿಐ ದಾಳಿ ನಡೆಸಿದ ಮರು ದಿನ ಅಂಚೆ ಕಚೇರಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಬುಲಂದ್‌ಶಹರ್ ನಲ್ಲಿ ಅಂಚೆ ಕಚೇರಿಯ ಮುಖ್ಯ ಕಚೇರಿಯ ಮೇಲೆ ಸಿಬಿಐ ನ ಭ್ರಷ್ಟಾಚಾರ ನಿಗ್ರಹ ಪಡೆ ದಾಳಿ ನಡೆಸಿತ್ತು. ನಿವೃತ್ತ ಫೀಲ್ಡ್ ಆಫೀಸರ್ ಸೇರಿದಂತೆ ಎಂಟು ನೌಕರರು ಲಂಚದ ಬೇಡಿಕೆಯ ಆರೋಪ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು.
ಸೂಪರಿಂಟೆಂಡೆಂಟ್ ತ್ರಿಭುವನ್ ಪ್ರತಾಪ್ ಸಿಂಗ್ ಇಂದು ಬೆಳಗ್ಗೆ ಅಲಿಗಢ್‌ನಲ್ಲಿರುವ ತಮ್ಮ ಮನೆಯಲ್ಲಿ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಳಿಯಿಂದಾಗಿ ಸಿಂಗ್ ಅವರು "ಅತ್ಯಂತ ಒತ್ತಡಕ್ಕೆ ಒಳಗಾಗಿದ್ದರು" ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ, ದಾಳಿಯಿಂದಾಗಿ ಅವರು ಒತ್ತಡದಲ್ಲಿದ್ದರು ಎಂದು ಅವರ ಕುಟುಂಬ ನಿರಾಕರಿಸಿದೆ. ಮಹಿಳೆ ಮತ್ತು ಕೆಲವು ಅಧಿಕಾರಿಗಳು ತಮ್ಮ ಪರ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಪೋಸ್ಟಲ್ ಸೂಪರಿಂಟೆಂಡೆಂಟ್ ಬರೆದಿರುವ ಸೂಸೈಡ್ ನೋಟ್ ನ್ನು ಸಿಂಗ್ ಅವರ ಸಹೋದರ ಹಂಚಿಕೊಂಡಿದ್ದಾರೆ. ತನ್ನ ಅಧಿಕೃತ ಲೆಟರ್‌ಹೆಡ್ ಹೊಂದಿರುವ ಕಾಗದದ ಮೇಲೆ ಹಿಂದಿಯಲ್ಲಿ ಬರೆದ ಟಿಪ್ಪಣಿಯಲ್ಲಿ, ಸಿಂಗ್ ಹಲವಾರು ಸಹೋದ್ಯೋಗಿಗಳು ತಮ್ಮ ಆದೇಶಗಳ ಪ್ರಕಾರ ಕೆಲಸ ಮಾಡಲು ಒತ್ತಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ಅವರು ಈ ಟಿಪ್ಪಣಿಯನ್ನು ಕಚೇರಿಯ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಅವರ ಸಹೋದ್ಯೋಗಿಗಳು ನಮಗೆ ಟಿಪ್ಪಣಿಯನ್ನು ಕಳುಹಿಸಿದ್ದಾರೆ ಮತ್ತು ನಾವು ಅವರ ಮನೆಗೆ ಧಾವಿಸಿ ನೋಡಿದಾಗ ಅದು ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ. ನಾವು ಮನೆಗೆ ನುಗ್ಗಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ನಮಗೆ ಕಂಡುಬಂದಿದೆ" ಎಂದು ಅವರ ಸಹೋದರ ಪ್ರೇಮ್ ಪಾಲ್ ಸಿಂಗ್ ಹೇಳಿದ್ದಾರೆ.
ಅಲಿಘರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಉದ್ದೇಶಿಸಿ ಬರೆದಿರುವ ಟಿಪ್ಪಣಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement