
ಥಾಣೆ: ಕುಟುಂಬ ಕಲಹ ತಾರಕಕ್ಕೇರಿ ರಸ್ತೆಯಲ್ಲಿಯೇ ದುಬಾರಿ SUV ಕಾರಿನ ಮೂಲಕ ಪರಸ್ಪರ ಗುದ್ದಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಹೌದು.. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ಎಸ್‌ಯುವಿ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ಮತ್ತೊಂದು ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆದಿದ್ದರಿಂದ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನನಿಬಿಡ ರಸ್ತೆಯಲ್ಲಿ ಕಪ್ಪು ಬಣ್ಣದ ಎಸ್‌ಯುವಿ ಪದೇ ಪದೇ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಕಪ್ಪು ಬಣ್ಣದ SUV ಬಿಳಿ ಬಣ್ಣಗ SUV ಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಕಪ್ಪು ಬಣ್ಣದ ಎಸ್ ಯುವಿ (Tata Harriers) ಚಾಲಕ ಪದೇ ಪದೇ ಬಿಳಿ ಬಣ್ಣದ ಎಸ್ ಯುವಿಗೆ ಢಿಕ್ಕಿ ಹೊಡೆಸುತ್ತಾನೆ. ಬಳಿಕ ಯೂ ಟರ್ನ್ ತೆಗೆದುಕೊಂಡು ಬಿಳಿ SUVಯನ್ನು ಮತ್ತೆ ಹೊಡೆಯುತ್ತಾನೆ. ಇದರಿಂದ ಒಂದು ಮಗು ಸೇರಿ ನಾಲ್ವರಿಗೆ ಗಾಯಗಳಾಗಿವೆ.
ಖಾಸಗಿ ವಾಹಿನಿಯೊಂದರ ವರದಿಯ ಪ್ರಕಾರ ಕಪ್ಪು ಬಣ್ಣದ ಎಸ್‌ಯುವಿ ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಆತನ ಪತ್ನಿಯ ನಡುವಿನ ಜಗಳ ಈ ಘಟನೆಗೆ ಕಾರಣವಂತೆ. ಇತರ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಮಹಿಳೆ ಮತ್ತು ದಂಪತಿಯ ಮಗುವನ್ನು ತಮ್ಮೊಂದಿಗೆ ಕರೆದೊಯ್ಯಲು ನಿರ್ಧರಿಸಿದ ನಂತರ, ಕೋಪಗೊಂಡ ವ್ಯಕ್ತಿ ಉದ್ದೇಶಪೂರ್ವಕವಾಗಿ ಅವರು ಚಲಿಸುತ್ತಿದ್ದ ಬಿಳಿ ಬಣ್ಣದ ಕಾರಿಗೆ ತನ್ನ ಕಪ್ಪು ಬಣ್ಣಗ ಕಾರಿನ ಮೂಲಕ ಢಿಕ್ಕಿಹೊಡೆಸಿದ್ದಾನೆ. ಫಾರ್ಚುನರ್ ಕಾರಿನ ಹಿಂಬದಿಯ ಸೀಟಿನಲ್ಲಿ ತಾಯಿ ಮತ್ತು ಮಗು ಕುಳಿತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಪ್ರಕರಣ ಸಂಬಂಧ ತಡರಾತ್ರಿಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಘಟನೆ?
ಥಾಣೆಯ ಅಂಬರನಾಥ್ ಜಂಭೂಲ್ ಫಾಟದಲ್ಲಿ ನಡೆದಿರುವ ಘಟನೆ ಇದು. ಬದ್ಲಾಪುರ ನಿವಾಸಿ ಸತೀಶ್ ಶರ್ಮಾ ಅವರ ತಂದೆ ಬಿಂದೇಶ್ವರ್ ಶರ್ಮಾ ಅವರು ತಮ್ಮ ಸೊಸೆ, ಮೊಮ್ಮಗ ಮತ್ತು ಇತರ ಕುಟುಂಬ ಸದಸ್ಯರನ್ನು ತಮ್ಮ ಕಾರಿನಲ್ಲಿ ಮುಂಬೈನ ಕೊಲಾಬಾದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದರು, ಆದರೆ ಇದು ಸತೀಶ್ ಶರ್ಮಾ ಅವರಿಗೆ ಇಷ್ಟವಾಗಲಿಲ್ಲ. ಇದರಿಂದ ಕೋಪಗೊಂಡು ಮನೆಯವರ ಕಾರನ್ನು ಹಿಂಬಾಲಿಸಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಹಿಂದಿನಿಂದ ತಂದೆಯ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಇಬ್ಬರು ಪಾದಚಾರಿಗಳಿಗೂ ಕಾರು ಡಿಕ್ಕಿ ಹೊಡೆದಿದೆ. ಇಲ್ಲಿ ನಿಲ್ಲದ ಸತೀಶ್, ಯು ಟರ್ನ್ ತೆಗೆದುಕೊಂಡು ಹಿಂತಿರುಗುತ್ತಿದ್ದಾಗ ಮತ್ತೆ ತಂದೆಯ ಬಿಳಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಥಾಣೆ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಪ್ಪು ಬಣ್ಣದ SUV ಚಾಲಕನಿಂದ ಗುರಿಯಾದ ಬಿಳಿ ಕಾರು ಮುಂಭಾಗದಿಂದ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ವಿಡಿಯೋದಲ್ಲಿ ಮಹಿಳೆಯರು ಕೂಡ ಬಿಳಿ ಬಣ್ಣದ ಕಾರಿನೊಳಗೆ ಕುಳಿತಿರುವುದು ಕಂಡುಬಂದಿದೆ.
Advertisement