ಕೋಲ್ಕತ್ತಾ: ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿಯ ಹತ್ಯೆ, ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಪಶ್ಚಿಮ ಬಂಗಾಳ ವೈದ್ಯರು ಸುಪ್ರೀಂ ಕೋರ್ಟ್ ಮನವಿಯ ಹೊರತಾಗಿಯೂ ತಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತ ವೈದ್ಯರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದ ಸುಪ್ರೀಂ ಕೋರ್ಟ್ ಪ್ರತಿಭಟನೆಯನ್ನು ಕೈಬಿಡುವಂತೆ ವೈದ್ಯ ಸಮೂಹಕ್ಕೆ ಮನವಿ ಮಾಡಿತ್ತು. ಸುಪ್ರೀಂ ಕೋರ್ಟ್ ಮನವಿಯ ಬಳಿಕ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಪ್ರತಿಭಟನೆ ಕೈಬಿಟ್ಟಿದ್ದರು.
ಕೋಲ್ಕತ್ತಾ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಭೀಕರ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ಏಮ್ಸ್ ಆಸ್ಪತ್ರೆಯ ನಿವಾಸಿ ವೈದ್ಯರು ತಮ್ಮ ಸುಮಾರು ಎರಡು ವಾರಗಳ ಮುಷ್ಕರವನ್ನು ಇಂದು ಹಿಂತೆಗೆದುಕೊಂಡರು.
ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್, ಅಥವಾ RDA ಇಂದು ಹೇಳಿಕೆ ಬಿಡುಗಡೆ ಮಾಡಿದ್ದು, ಸುಪ್ರೀಂ ಕೋರ್ಟ್‌ನಿಂದ ಭರವಸೆಯನ್ನು ಪಡೆದ ನಂತರ ಪ್ರತಿಭಟನೆ ಕೈಬಿಡುತ್ತಿರುವುದಾಗಿ ಹೇಳಿದೆ. ದೇಶಾದ್ಯಂತ ವೈದ್ಯಕೀಯ ವೃತ್ತಿಪರರಿಗೆ ಮನವಿ ಮಾಡಿದ್ದ ಸುಪ್ರೀಂ ಕೋರ್ಟ್, "ದಯವಿಟ್ಟು ನಮ್ಮನ್ನು ನಂಬಿ" ಮತ್ತು ಕರ್ತವ್ಯಕ್ಕೆ ಮರಳಿ ಎಂದು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವೈದ್ಯರು ಕೂಡ ಇಂದು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.
ವೈದ್ಯೆಯ ಅತ್ಯಾಚಾರ, ಘಟನೆಯ ಬಗ್ಗೆ ಮಂಗಳವಾರದಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತು ಮತ್ತು ಕಾಲೇಜಿನ ಪ್ರಾಂಶುಪಾಲರ ನಡವಳಿಕೆ ಮತ್ತು ನಂತರ ನಡೆಸಿದ ತನಿಖೆಯ ವಿರುದ್ಧ ತೀವ್ರ ಅವಲೋಕನಗಳನ್ನು ಮಾಡಿತು. ಈ ಬಳಿಕ ವೈದ್ಯಕೀಯ ಆರೈಕೆಯ ಅಗತ್ಯವಿರುವ ಜನರ ಮೇಲೆ ಪರಿಣಾಮ ಬೀರುವ ಕಾರಣ ಕರ್ತವ್ಯವನ್ನು ಪುನರಾರಂಭಿಸುವಂತೆ ಸುಪ್ರೀಂ ಕೋರ್ಟ್ ವೈದ್ಯರಿಗೆ ಮನವಿ ಮಾಡಿತ್ತು. ಆದರೆ ಸುಪ್ರೀಂ ಮನವಿಯ ಹೊರತಾಗಿಯೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಬಂಗಾಳ ವೈದ್ಯರು ಹೇಳಿದ್ದಾರೆ.
Advertisement