
ಮುಂಬೈ: ನೇಪಾಳದ ತನಾಹುನ್ ಜಿಲ್ಲೆಯ ಅಂಬುಖೆರೇನಿ ಪ್ರದೇಶದಲ್ಲಿ ಶುಕ್ರವಾರ ಮರ್ಸ್ಯಂಗ್ಡಿ ನದಿಗೆ ಬಸ್ ಉರುಳಿ ಬಿದ್ದ ದುರಂತದಲ್ಲಿ ಮಹಾರಾಷ್ಟ್ರದ ಕನಿಷ್ಠ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ 40 ಪ್ರಯಾಣಿಕರಿದ್ದ ಬಸ್ ಪೊಖರಾದಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ತೆರಳುತ್ತಿದ್ದಾಗ 150 ಅಡಿ ಆಳದ ನದಿಗೆ ಉರುಳಿ, ಈ ದುರಂತ ಸಂಭವಿಸಿದೆ.
ಮೃತದೇಹಗಳು ಮತ್ತು ಗಾಯಾಳುಗಳನ್ನು ಉತ್ತರ ಪ್ರದೇಶ-ನೇಪಾಳ ಗಡಿಯ ಮಹಾರಾಜ್ ಗಂಜ್ ಜಿಲ್ಲೆಯ ಮೂಲಕ ಶನಿವಾರ ಮಧ್ಯಾಹ್ನ ಭಾರತಕ್ಕೆ ತರಲಾಗುತ್ತಿದೆ. ಗೋರಖ್‌ಪುರ ಮತ್ತು ನಾಸಿಕ್ ವಿಮಾನ ನಿಲ್ದಾಣದ ಮೂಲಕ ಜಲಗಾಂವ್‌ಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಲಾಹು ಮಾಲಿ ತಿಳಿಸಿದ್ದಾರೆ.
ವಾಣಿಜ್ಯ ವಿಮಾನದಲ್ಲಿ ಇಷ್ಟೊಂದು ಶವಗಳನ್ನು ಮತ್ತು ಗಾಯಾಳುಗಳನ್ನು ಸಾಗಿಸಲು ಸಾಧ್ಯವಿಲ್ಲದ ಕಾರಣ, ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರ ಭಾರತೀಯ ವಾಯುಪಡೆಗೆ (ಐಎಎಫ್) ಪತ್ರ ಬರೆದಿದೆ. ಗೋರಖ್‌ಪುರದಿಂದ ನಾಸಿಕ್ ವಿಶೇಷ ವಿಮಾನ ವ್ಯವಸ್ಥೆಯಾಗುವ ಸಾಧ್ಯತೆಯಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ವೆಚ್ಚಗಳನ್ನು ಭರಿಸಲಿದೆ ಎಂದು ಅವರು ಹೇಳಿದ್ದಾರೆ.
ಬಸ್ ದುರಂತದಲ್ಲಿ ಮಹಾರಾಷ್ಟ್ರದ ಕೆಲವು ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಬೆಳಗ್ಗೆ ಹೇಳಿದ್ದರು. ಜಲಗಾಂವ್, ಭೂಸಾವಲ್, ತಲ್ವೇಲ್ ಮತ್ತು ವರಂಗಾವ್ ನಿಂದ ಸುಮಾರು 41 ಪ್ರಯಾಣಿಕರಿದ್ದ ಬಸ್ ನಲ್ಲಿ 26 ಮಂದಿ ಸಾವನ್ನಪ್ಪಿದ್ದು, ಸುಮಾರು 14 ಮಂದಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಲಾಗಿದೆ.
ಸ್ಥಳೀಯ ಪೊಲೀಸ್, ಜಿಲ್ಲೆ ಮತ್ತು ನೇಪಾಳ ಸೇನಾ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಿದ್ದು, ಇಂದು ಸಂಜೆಯ ವೇಳೆಗೆ ಪೂರ್ಣಗೊಂಡಿದೆ. ಮಧ್ಯಾಹ್ನ ಭೀಕರ ದುರಂತದ ವಿವರಗಳು ಸಿಕ್ಕಿದ್ದರಿಂದ, ರಾಜ್ಯ ಸರ್ಕಾರ ದೆಹಲಿಯಲ್ಲಿರುವ ನೇಪಾಳ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿತ್ತು.
ಜಲಗಾಂವ್ ಕಲೆಕ್ಟರ್ ಮಹಾರಾಜ್‌ಗಂಜ್ (ಉತ್ತರ ಪ್ರದೇಶ) ಕಲೆಕ್ಟರ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ. ಮೃತದೇಹಗಳು ಮತ್ತು ಗಾಯಗೊಂಡವರನ್ನು ತರಲು ಮಹಾರಾಷ್ಟ್ರ ಸರ್ಕಾರ ಉತ್ತರ ಪ್ರದೇಶ ಸರ್ಕಾರ ಮತ್ತು ನೇಪಾಳದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಫಡ್ನವಿಸ್ ಹೇಳಿದರು.
Advertisement